ಉದಯವಾಹಿನಿ, ನಾಗ್ಪುರ : ಬಿಜೆಪಿ ವಲಯದಲ್ಲಿ ಹಿರಿಯರು ನಿವೃತ್ತರಾಗಬೇಕು ಎಂಬ ಬೇಡಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​​ಎಸ್​ಎಸ್​) ಮುಖ್ಯಸ್ಥ ಮೋಹನ್​ ಭಾಗವತ್​ ಅವರು ’75ರ ನಿವೃತ್ತಿ’ ಅಲಿಖಿತ ನಿಯಮವನ್ನು ಪಕ್ಷದ ಹಿರಿಯ ನಾಯಕರು ಪಾಲಿಸಬೇಕು ಎಂದು ಹೇಳಿದ್ದರು. ಇದೀಗ, ‘ಭಾರತದ ರಸ್ತೆ ಮಾನವ’ ಎಂದೇ ಖ್ಯಾತಿಯಾದ, ಕೇಂದ್ರ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರು ಅದೇ ಧಾಟಿಯಲ್ಲಿ ಹೇಳಿಕೆ ನೀಡಿದ್ದಾರೆ.  ಅಡ್ವಾಂಟೇಜ್ ವಿದರ್ಭ-ಖಾಸ್ದರ್ ಔದ್ಯೋಗಿಕ ಮಹೋತ್ಸವದ ಕುರಿತ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವರು, ಹೊಸ ಪೀಳಿಗೆಯ ಸಮುದಾಯ ಅಧಿಕಾರ ವಹಿಸಿಕೊಳ್ಳಬೇಕು. ವಿಷಯಗಳು ಸುಗಮವಾಗಿ ನಡೆಯುತ್ತಿರುವಾಗ ಹಿರಿಯರು ನಿವೃತ್ತಿ ಹೊಂದಬೇಕು ಎಂದು ಹೇಳಿದ್ದಾರೆ. ಆದರೆ, ಪಕ್ಷದ ಹಿರಿಯರು ಎಂದು ನಿರ್ದಿಷ್ಟವಾಗಿ ಉಲ್ಲೇಖಿಸದೆ ಪರೋಕ್ಷವಾಗಿ ಹೇಳಿದ್ದಾರೆ. ‘
ಎಲ್ಲವೂ ಸರಿ ಇದ್ದಾಗ ಗುಡ್​ಬೈ ಹೇಳಿ’: “ಹಂತ- ಹಂತವಾಗಿ ತಲೆಮಾರುಗಳು ಬದಲಾಗಬೇಕು. ಹಿರಿಯರಾದ ನಾವು ನಿವೃತ್ತಿ ಪಡೆದು, ಹೊಸ ತಲೆಮಾರಿಗೆ ನಮ್ಮ ಜಾಗವನ್ನು ಬಿಟ್ಟುಕೊಡಬೇಕು. ಎಲ್ಲವೂ ಸುಗಮವಾಗಿ ಸಾಗುವ ವೇಳೆ ನಾವು ಅಲ್ಲಿಂದ ಹೊರಬಂದು, ಹೊಸತೇನಾದರೂ ಮಾಡಬೇಕು” ಎಂದು ನಿತಿನ್​ ಗಡ್ಕರಿ ಅವರು ಪ್ರತಿಪಾದಿಸಿದ್ದಾರೆ.ವಿದರ್ಭ ಪ್ರಾಂತ್ಯದಲ್ಲಿ ವಿವಿಧ ವಲಯಗಳಲ್ಲಿ ಬಹಳಷ್ಟು ಉತ್ತಮ ಉದ್ಯಮಿಗಳಿದ್ದಾರೆ. ಮೂರು ದಿನಗಳ ಈ ಕಾರ್ಯಕ್ರಮದ ಮೂಲಕ ವಿದರ್ಭವನ್ನು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ಪ್ರಮುಖ ಪಾಲುದಾರನನ್ನಾಗಿ ಮಾಡುವ ಉದ್ದೇಶವಿದೆ. ಯಾವುದೇ ಪ್ರದೇಶವು ಅಭಿವೃದ್ಧಿ ಹೊಂದಲು ಕೈಗಾರಿಕಾ ವಲಯ, ಕೃಷಿ, ಅದಕ್ಕೆ ಸಂಬಂಧಿತ ವಲಯಗಳು ಮತ್ತು ಸೇವಾ ವಲಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರವರಿ 6ರಿಂದ 8ರವರೆಗೆ ನಾಗ್ಪುರದಲ್ಲಿ ಮೂರನೇ ಕಂತಿನ ಅಡ್ವಾಂಟೇಜ್ ವಿದರ್ಭ ಎಕ್ಸ್‌ಪೋ ನಡೆಯಲಿದೆ. ಇದನ್ನು ಆಯೋಜಿಸುತ್ತಿರುವ ಕೈಗಾರಿಕಾ ಅಭಿವೃದ್ಧಿ ಒಕ್ಕೂಟದ (ಎಐಡಿ) ಮುಖ್ಯ ಮಾರ್ಗದರ್ಶಕರಾಗಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದರ್ಭ ಎಕ್ಸ್‌ಪೋದಲ್ಲಿ ಜವಳಿ, ಪ್ಲಾಸ್ಟಿಕ್, ಖನಿಜ, ಕಲ್ಲಿದ್ದಲು, ವಾಯುಯಾನ, ಸರಕು ಸಾಗಣೆ, ಐಟಿ, ಆರೋಗ್ಯ, ಔಷಧ ಕ್ಷೇತ್ರ, ರಕ್ಷಣೆ, ರಿಯಲ್ ಎಸ್ಟೇಟ್, ನವೀಕರಿಸಬಹುದಾದ ಇಂಧನ ಮತ್ತು ಸ್ಟಾರ್ಟ್​​ಅಪ್​ ವಲಯಗಳ ಕೈಗಾರಿಕೆಗಳು ಭಾಗವಹಿಸಲಿವೆ.

Leave a Reply

Your email address will not be published. Required fields are marked *

error: Content is protected !!