ಉದಯವಾಹಿನಿ, ಬೆಂಗಳೂರು: ಸರ್ಕಾರಿ ನೇಮಕಾತಿಗಳ ವಿಷಯದಲ್ಲಿ ಖಡಕ್‌ ಎಂದೇ ಹೆಸರುವಾಸಿಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಇದೀಗ ರಾಜ್ಯ ಮಾಹಿತಿ ಹಕ್ಕು ಆಯುಕ್ತರ ನೇಮಕಾತಿ ವಿಷಯ ತಲೆನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಮುಖ್ಯ ಮಾಹಿತಿ ಹಕ್ಕು ಅಯುಕ್ತರು ಸೇರಿದಂತೆ ಹತ್ತು ಮಂದಿ ಮಾಹಿತಿ ಆಯುಕ್ತರ ಹುದ್ದೆಗಳಿದ್ದು,ಈ ಪೈಕಿ ಎಂಟು ಹುದ್ದೆಗಳು ಖಾಲಿಯಾಗಿವೆ. ಹೀಗಾಗಿ ಈ ಹುದ್ದೆಗಳನ್ನು ಭರ್ತಿ ಮಾಡಲು ತಯಾರಿ ನಡೆಸಿದ ರಾಜ್ಯ ಸರ್ಕಾರ,ಈ ಸಂಬಂಧ ಅರ್ಜಿಗಳನ್ನು ಆಹ್ವಾನಿಸಿತ್ತು.
ಹೀಗೆ ಸರ್ಕಾರ ಅರ್ಜಿ ಆಹ್ವಾನಿಸಿದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳಿಗೆ ನಿವೃತ್ತ ಐಎಎಸ್,ಐಪಿಎಸ್ ಅಧಿಕಾರಿಗಳು,ಪತ್ರಕರ್ತರು ಸೇರಿದಂತೆ ಐನೂರಕ್ಕೂ ಹೆಚ್ಚು ಮಂದಿ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.  ಮೂಲಗಳ ಪ್ರಕಾರ, ಇಂತಹ ಅರ್ಜಿಗಳನ್ನು ಪರಿಶೀಲಿಸಿ ಮಾಹಿತಿ ಹಕ್ಕು ಆಯಕ್ತರ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಹಲವು ದಿನಗಳ ಹಿಂದೆಯೇ ಪೂರ್ಣವಾಗಬೇಕಿತ್ತು. ಇಂತಹ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಈ ಹುದ್ದೆಗಳಿಗೆ ನೇಮಕ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಸಂಬಂಧ ಪಟ್ಟ ಕಡತವನ್ನು ಪರಿಶೀಲಿಸಬೇಕಿತ್ತು. ಆದರೆ ಇದೀಗ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳಿಗೆ ಪ್ರಭಾವ ಬೀರುತ್ತಿರುವವರನ್ನು ನೋಡಿ ಮುಖ್ಯಮಂತ್ರಿಗಳಿಗೆ ತಲೆನೋವು ಶುರುವಾಗಿದೆ.

ಮೂಲಗಳ ಪ್ರಕಾರ, ಈ ಹುದ್ದೆಗಳಿಗೆ ಇಂತವರನ್ನು ನೇಮಕ ಮಾಡಿ ಎಂದು ರಾಜ್ಯ ಕಾಂಗ್ರೆಸ್‌‍ ಉಸ್ತುವಾರಿ ವಹಿಸಿರುವ ರಣದೀಪ್‌ ಸಿಂಗ್‌ ಸುರ್ಜೇವಾಲ,ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವಿಯಾಗಿರುವ ನಾಯಕ ಟೈಟ್ಲರ್‌,ಸಾಹಿತ್ಯ ಲೋಕದ ಮೇರು ಪ್ರಶಸ್ತಿಯನ್ನು ಗಳಿಸಿದ ಸಾಹಿತಿಗಳು ಸೇರಿದಂತೆ ಹಲವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಕುತೂಹಲದ ಸಂಗತಿ ಎಂದರೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿದ್ದಾಗ ಮಾತ್ರವಲ್ಲ,ಮೈಸೂರು ಸೇರಿದಂತೆ ವಿವಿಧ ಕಡೆ ಪ್ರವಾಸಗಳಿಗೆ ಹೋದರೂ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗೆ ಇಂತವರನ್ನು ನೇಮಕ ಮಾಡಿ ಎಂದು ಹೇಳಲು ಪ್ರಭಾವಿಗಳು ಮುಗಿಬೀಳುತ್ತಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!