ಉದಯವಾಹಿನಿ, ಬೆಂಗಳೂರು, : ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಬದಲಾವಣೆಯ ವಿವಾದಗಳ ಬಗ್ಗೆ ಕರ್ನಾಟಕದ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶುಕ್ರವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಹಲವಾರು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ರಾಷ್ಟ್ರೀಯತೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.ಕಾಂಗ್ರೆಸ್ ನಾಯಕರು ಕಮ್ಯುನಿಸ್ಟರು ಮತ್ತು ರಾಷ್ಟ್ರೀಯತೆಯ ದೃಷ್ಟಿಕೋನಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಮಾಜಿ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಕಾಂಗ್ರೆಸ್‌ನ ಗದ್ದಲದ ನಡುವೆ ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಅಧ್ಯಾಯಗಳನ್ನು ಪುಸ್ತಕಗಳಿಂದ ತೆಗೆಯಬಹುದು ಎಂದು ಆರೋಪಿಸಿದ್ದಾರೆ.ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಸಚಿವ ಬಿಸಿ ನಾಗೇಶ್, “ಜನರ ಗಮನವನ್ನು ಬೇರೆಡೆ ಸೆಳೆಯಲು ಈಗ ಪಠ್ಯಪುಸ್ತಕಗಳತ್ತ ಬಂದಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ಸದಾ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯನವರು ಸ್ವಯಂ ಘೋಷಿತ ಶಿಕ್ಷಣತಜ್ಞರು, ಮೂಲತಃ ಅವರು ಕಮ್ಯುನಿಸ್ಟರು. ಅವರು ಯಾವುದೇ ರಾಷ್ಟ್ರೀಯವಾದಿ ಚಿಂತನೆಗಳನ್ನು ಪ್ರೋತ್ಸಾಹಿಸುವುದಿಲ್ಲ” ಎಂದಿದ್ದಾರೆ.ಈ ವರ್ಷದ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದ ಅವರು, “ನಾವು ಈ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪಠ್ಯಪುಸ್ತಕಗಳಲ್ಲಿ ಬದಲಾವಣೆಗಳನ್ನು ಮಾಡಿದ್ದೇವೆ. ಆದರೆ ಈ ಬದಲಾವಣೆಗಳಿಂದ ಅವರಿಗೆ ನೋವಾಯಿತು. ನಾವು ನೆಹರೂ ಬಗ್ಗೆ ಪಾಠಗಳನ್ನು ತೆಗೆದುಹಾಕಿದ್ದೇವೆ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಪಾಠಗಳನ್ನು ಕಡಿಮೆಗೊಳಿಸಿದ್ದೇವೆ” ಎಂದು ಹೇಳಿದ್ದಾರೆ.ಮುಂದುವರೆದು, “ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸುವಂತಹ ಪಾಠಗಳನ್ನು ನಾವು ಸೇರಿಸಿದ್ದೇವೆ. ಕಾಂಗ್ರೆಸ್ ದೇಶ ಮತ್ತು ರಾಜ್ಯದಲ್ಲಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದರೂ ಶಿಕ್ಷಣ ವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಾವು ಮೆಕಾಲೆ ರೂಪಿಸಿದ ಅದೇ ವ್ಯವಸ್ಥೆಯನ್ನು ಅಭ್ಯಾಸ ಮಾಡುತ್ತಿದ್ದೆವು” ಎಂದು ಬಿಸಿ ನಾಗೇಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!