ಉದಯವಾಹಿನಿ,ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಹಗಲಿರುಳು ಶ್ರಮಿಸುತ್ತಿರುವ ನನ್ನ ಸಹೋದರಿಯರಿಗೆ,ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಶಾಲಾ ಕಾಲೇಜುಗಳಿಗೆ ಪ್ರಯಾಣ ಬೆಳೆಸುವ ವಿದ್ಯಾರ್ಥಿನಿಯರಿಗೆ ಅನಾರೋಗ್ಯ, ಅಗತ್ಯ ವಸ್ತುಗಳ ಖರೀದಿ ಇನ್ನಿತರ ಕೆಲಸ ಕಾರ್ಯಗಳ ನಿಮಿತ್ತ ಪ್ರಯಾಣ ಮಾಡುವ ನಾಡಿನ ತಾಯಂದಿರಿಗೆ ನಮ್ಮ ಈ ಶಕ್ತಿ ಯೋಜನೆಯನ್ನು ಅತ್ಯಂತ ಹೆಮ್ಮೆಯಿಂದ ಅರ್ಪಿಸುತ್ತಿದ್ದೇನೆ.ಆರ್ಥಿಕ ಸಂಕಷ್ಟದ ನಡುವೆಯೂ ಬದುಕಿನ ಉತ್ಸಾಹ ಕಳೆದುಕೊಳ್ಳದೆ, ಸವಾಲುಗಳನ್ನು ಮೆಟ್ಟಿನಿಂತು ಹೋರಾಟದ ಮೂಲಕ ಬದುಕು ಕಟ್ಟಿಕೊಂಡಿರುವ ಕನ್ನಡ ನೆಲದ ಪ್ರತಿ ಮಹಿಳೆಯೂ ನಮ್ಮ ಈ ಯೋಜನೆಯ ಹಿಂದಿನ ಪ್ರೇರಕ ಶಕ್ತಿ.ನಾಡಿನ ಎಲ್ಲ ಮಹಿಳೆಯರು ನಮ್ಮ ಈ ಯೋಜನೆಯ ಲಾಭ ಪಡೆದು ಮತ್ತಷ್ಟು ಸಶಕ್ತ ಮತ್ತು ಸ್ವಾವಲಂಬಿಗಳಾಗಲಿ ಎಂದು ಮನಸ್ಪೂರ್ತಿಯಾಗಿ ಹಾರೈಸುತ್ತೇನೆ ಅಂತ ತಿಳಿಸಿದರು. ಯಾವುದೇ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಪುರುಷರಷ್ಟೇ ಮಹಿಳೆಯರೂ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!