ಉದಯವಾಹಿನಿ, ಬೆಂಗಳೂರು : ಮತ್ತೊಬ್ಬ ನಕ್ಸಲ್ ನಾಯಕಿ ತೊಂಬಟ್ಟು ಲಕ್ಷ್ಮಿ ಇಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶರಣಾಗುವ ಸಾಧ್ಯತೆಯಿದೆ.ಮೂಲಸೌಲಭ್ಯಗಳ ಕೊರತೆ ಹಾಗೂ ಅರಣ್ಯ ಅಧಿಕಾರಿಗಳ ಕಿರುಕುಳ ವಿರೋಧಿಸಿ ನಡೆಯುತ್ತಿದ್ದ ಹೋರಾಟದಲ್ಲಿ ಭಾಗಿಯಾಗಿದ್ದ ಲಕ್ಷ್ಮಿ 2006 ರಿಂದ ಭೂಗತರಾಗಿದ್ದರು.
ಕುಂದಾಪುರ ತಾಲ್ಲೂಕಿನ ತೊಂಬಟ್ಟು ನಿವಾಸಿಯಾಗಿರುವ ಲಕ್ಷ್ಮಿ ಸುಮಾರು 20 ವರ್ಷಗಳ ಬಳಿಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ.ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಲಕ್ಷ್ಮಿ ಅವರ ಸಹೋದರ ತಮ ಸಹೋದರಿಯನ್ನು ಮನೆಗೆ ಕರೆದುಕೊಳ್ಳಲು ಸಂತೋಷವಾಗುತ್ತಿದೆ. ಆಕೆಯನ್ನು ನೋಡಬೇಕು ಎಂಬ ಆಸೆ ತುಂಬಾ ಇತ್ತು. ಬಹಳ ವರ್ಷವಾದರೂ ಇದು ಸಾಧ್ಯವಾಗಿರಲಿಲ್ಲ ಎಂದರು.
ಅರಣ್ಯ ಇಲಾಖೆಯಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಅಡಿಕೆ ಗಿಡ ಕಡಿದು ಹಾಕುವುದು, ತೆಂಗಿನ ಗಿಡ ಕಿತ್ತುಹಾಕುವುದು, ಭತ್ತ ನಾಟಿ ಮಾಡಿದರೂ ಹಾಳು ಮಾಡುತ್ತಿದ್ದರು. ಅಂತಹ ತೊಂದರೆಗಳ ವಿರುದ್ಧ ಹೋರಾಟಕ್ಕಿಳಿದು ನಕ್ಸಲ್ ಚಳವಳಿಗೆ ಸೇರಿರಬಹುದು ಎಂದು ತಿಳಿಸಿದರು.
ಸಂಡೂರು ಪ್ರಾಜೆಕ್ಟ್ಗೆ ಕೆಲಸಕ್ಕೆಂದು ಹೋದ ಲಕ್ಷ್ಮಿ ಮತ್ತೆ ಮನೆಗೆ ಬರಲಿಲ್ಲ. ಮೂರು ದಿನಗಳವರೆಗೂ ನಾವು ಕಾದುನೋಡಿ ನಂತರ ಪೊಲೀಸರಿಗೆ ದೂರು ನೀಡಿದ್ದೆವು. ಆಕೆ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷ್ಯರ ಬಳಿ ಭವಿಷ್ಯ ಕೇಳಿದಾಗ ಆಕೆ ಸಂತೋಷವಾಗಿದ್ದಾಳೆ. ಚಿಂತೆ ಮಾಡಬೇಡಿ ಎಂದು ಹೇಳಿದ್ದರು.
ನಮಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೂರು ನೀಡಿದೆವು. ಇದಾದ ಬಳಿಕ ಸಮಸ್ಯೆ ಜಾಸ್ತಿಯಾಯಿತು. ಎಸ್ಬಿಎಫ್ ಹಾಗೂ ಇತರ ಪೊಲೀಸರು ನಮನ್ನು ಬಂದೂಕಿನಲ್ಲಿ ಸುಟ್ಟು ಹಾಕುವುದಾಗಿ ಬೆದರಿಸಿದ್ದರು. ನೆಮದಿಯಾಗಿರಲು ಬಿಡಲಿಲ್ಲ. ನಾವು ಎಲ್ಲವನ್ನೂ ಅನುಭವಿಸಬೇಕಾಯಿತು. ಕೊನೆಗೆ ಪ್ರತಾಪ್ ಶೆಟ್ಟರ ಬಳಿ ದೂರು ಹೇಳಿದ ನಂತರ ತೊಂದರೆ ಕಡಿಮೆಯಾಯಿತು ಎಂದರು.
