ಉದಯವಾಹಿನಿ, ಗದಗ: ‘ಬಡ್ಡಿಗೆ ಸಾಲ ನೀಡಿ, ಕಿರುಕುಳ ನೀಡುತ್ತಿದ್ದಾರೆ” ಎಂಬ ದೂರಿನ ಮೇರೆಗೆ ನಗರದ ಯಲ್ಲಪ್ಪ ಮಿಸ್ಕಿನ್ ಅವರಿಗೆ ಸೇರಿದ 13 ಸ್ಥಳಗಳ ಮೇಲೆ ಮಂಗಳವಾರ ರಾತ್ರಿ ಏಕಕಾಲಕ್ಕೆ ಪೊಲೀಸರು ದಾಳಿ ನಡೆಸಿದರು. ₹4.90 ಕೋಟಿ ನಗದು ಮತ್ತು ಚಿನ್ನ ವಶಪಡಿಸಿಕೊಂಡರು. ಯಲ್ಲಪ್ಪ ಮಿಸ್ಕಿನ್ ಸೇರಿ ಐವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

ಅಶೋಕ ಗಣಾಚಾರಿ ಎಂಬುವರು ಯಲ್ಲಪ್ಪ ಅವರಿಂದ ₹1.93 ಕೋಟಿ ಹಣವನ್ನು ಬಡ್ಡಿ ಸಾಲ ಪಡೆದಿದ್ದರು. ಸಾಲ ಕೊಟ್ನಾಗಿನಿಂದ ಈವರೆಗೆ ₹1.40 ಕೋಟಿ ಹಣ ವಸೂಲಿ ಮಾಡಿಕೊಂಡಿದ್ದರು. ಜತೆಗೆ ಸಾಲಗಾರನನ್ನು ಬೆದರಿಸಿ, ಕಿರುಕುಳ ನೀಡಿ ಕೋಟ್ಯಂತರ ರೂಪಾಯಿ ಮೌಲ್ಯದ ಕಲ್ಯಾಣ ಮಂಟವನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಅಶೋಕ ಗಣಾಚಾರಿ ಅವರ ದೂರು ಆಧರಿಸಿ ದಾಳಿ ನಡೆಸಿದಾಗ, ₹4.90 ಕೋಟಿ ನಗದು, 992 ಗ್ರಾಂ ಚಿನ್ನ, 600 ಚೆಕ್, 650 ಬಾಂಡ್ ಪೇಪರ್, 4 ಎಟಿಎಂ ಕಾರ್ಡ್, 9 ಪಾಸ್‌ಬುಕ್, 2 ಎಲ್‌ಐಸಿ ಬಾಂಡ್ ಗಳು ಮತ್ತು 65 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.’ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಯಲ್ಲಪ್ಪ ಮಿಸ್ಕಿನ್, ವಿಕಾಶ ಮಿಸ್ಕಿನ್, ಮಂಜು ಶ್ಯಾವಿ, ಈರಣ್ಣ ಬೂದಿಹಾಳ, ಮೋಹನ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!