ಉದಯವಾಹಿನಿ, ಬೆಂಗಳೂರು: ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರ ವಿಶೇಷ ಕಾಳಜಿಯ ಪ್ರಯತ್ನದ ಫಲವಾಗಿ ರಾಜ್ಯದ 486 ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ ಒಟ್ಟು 20 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ.ರೈತ ಉತ್ಪಾದನಾ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕೃಷಿ ಸಚಿವರು ಮೂರು ವರ್ಷಗಳಿಂದ ಬಿಡುಗಡೆಯಾಗದಿದ್ದ ಈ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಬಿಜೆಪಿ ಸರ್ಕಾರ ಅಮೃತ ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ ಮತ್ತು ಪ್ರೋತ್ಸಾಹಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿ, ಯಾವುದೇ ಅನುದಾನ ನೀಡದೆ ಕೇವಲ ಭರವಸೆ ನೀಡಿತ್ತು. ಆದರೆ, ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ಎಫ್.ಪಿ.ಒ ಅನುದಾನ ಒದಗಿಸುವಲ್ಲಿ ಯಶಸ್ವಿಯಾಗಿದ್ದು ರೈತ ಉತ್ಪಾದನಾ ಸಂಸ್ಥೆಗಳು ಕೃಷಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿವೆ.
ಪ್ರೋತ್ಸಾಹ ಕಾರ್ಯಕ್ರಮ : ರಾಜ್ಯದಲ್ಲಿ ರೈತ /ಮೀನುಗಾರರ /ನೇಕಾರರನ್ನು ಸಂಘಟಿಸಿ ಅವರ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೇ ಅವರು ಬೆಳೆದಂತಹ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ರೈತರನ್ನು ಸಂಘಟಿಸಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಸರಿಯಾದ ಸಮಯದಲ್ಲಿ ರೈತರು ಉತ್ಪಾದಿಸುವ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯನ್ನು ದೊರಕಿಸಿಕೊಡುವ ಉದ್ದೇಶದಿಂದ ರೈತ ಎಫ್.ಪಿ.ಒ.ಗಳನ್ನು ಸ್ಥಾಪಿಸಲಾಗಿದೆ.
