ಉದಯವಾಹಿನಿ, ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಕೆ.ಎನ್.ರಾಜಣ್ಣ ಈವರೆಗೂ ದೂರು ನೀಡಿಲ್ಲ. ದೂರು ನೀಡಿದ ಬಳಿಕ ಅಗತ್ಯ ತನಿಖೆ ನಡೆಸಲು ನಮ ಸರ್ಕಾರ ಸಿದ್ಧವಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್‌ಗೆ ಸಂಬಂಧಪಟ್ಟಂತೆ ಕೆೆ.ಎನ್.ರಾಜಣ್ಣ ಇನ್ನೂ ದೂರು ಕೊಟ್ಟಿಲ್ಲ. ದೂರು ಕೊಟ್ಟ ಬಳಿಕ ನಮ ಇಲಾಖೆ ಕೆಲಸ ಆರಂಭಿಸುತ್ತದೆ. ದೂರು ನೀಡದ ಮುನ್ನ ನಾವು ಏನೂ ಮಾಡಲಾಗುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನ ಮೇಲೆ ಯಾವುದೇ ಒತ್ತಡಗಳಿಲ್ಲ. ದೂರು ನೀಡದಿರುವ ಬಗ್ಗೆ ರಾಜಣ್ಣ ಅವರೇ ಉತ್ತರ ನೀಡಬೇಕು. ನಾನು ಅವರಿಂದ ಬಲವಂತವಾಗಿ ದೂರು ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಕರಣದ ತನಿಖೆ ನಡೆಸುವುದಾಗಿ ಈಗಾಗಲೇ ತಾವು ಹೇಳಿಕೆ ನೀಡಿದ್ದು, ಮುಖ್ಯಮಂತ್ರಿಯವರೂ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ದೂರು ಬಂದ ಬಳಿಕ ಯಾವ ರೀತಿಯ ತನಿಖೆ ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿರುವ ಹಾಗೂ ಹೈಕಮಾಂಡ್‌ಗೆ ದೂರು ಕೊಟ್ಟಿರುವ ಬಗ್ಗೆಯೂ ತಮಗೆ ಮಾಹಿತಿ ಇಲ್ಲ ಎಂದರು.
