ಉದಯವಾಹಿನಿ, ಬೆಂಗಳೂರು: ಶೀಘ್ರದಲ್ಲೇ ಶುಭಸುದ್ದಿ..! ಹೀಗಂತ ವಿಜಯಪುರದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಇದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಶೀಘ್ರದಲ್ಲೇ ರಾಜ್ಯದ ಜನತೆಗೆ ಶುಭ ಸುದ್ದಿ ಎಂದು ಪೋಸ್ಟ್ ಮಾಡಿರುವ ಅವರು, ಅಲ್ಲದೇ ನಿಮ ಫೈರ್ ಬ್ರಾಂಡ್ ಎಂದು ಬರೆದು ಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಶುಭ ಸುದ್ದಿ ಅಂದರೆ ಯಾರಿಗೆ? ರಾಜ್ಯದ ಜನತೆಗೋ? ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೋ? ಅವರ ಅಭಿಮಾನಿಗಳಿಗೋ? ಅವರ ಬೆಂಬಲಿಗರಿಗೋ? ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಕ್ಷದಿಂದ ಈಗಾಗಲೇ ಉಚ್ಚಾಟನೆ ಆಗಿರುವ ಯತ್ನಾಳ್, ಮತ್ತೆ ಬಿಜೆಪಿಗೆ ಮರಳುತ್ತಾರಾ? ಎಂಬ ಪ್ರಶ್ನೆ ಹುಟ್ಟುಹಾಕಿದ್ದು, ಯತ್ನಾಳ್ ಈ ಪೋಸ್ಟ್ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಒಂದೆಡೆ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ ಯಾಗುವ ಮಾತುಗಳು ಕೇಳಿ ಬರುತ್ತಿವೆ. ಪ್ರಮುಖವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬದಲಾವಣೆಯಾಗುತ್ತಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ಕೇಂದ್ರ ಸಚಿವ ವಿ. ಸೋಮಣ್ಣ ರಾಜ್ಯಾಧ್ಯಕ್ಷರಾಗುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಗಬೇಕು ಎಂದು ಯತ್ನಾಳ್ ಹಾಗೂ ವಿರೋಧಿ ಬಣ ಪಟ್ಟು ಹಿಡಿದಿತ್ತು. ಹೀಗಾಗಿ ಸೋಮಣ್ಣ ರಾಜ್ಯಾಧ್ಯಕ್ಷರಾದ ಬಳಿಕ ಮರಳಿ ಯತ್ನಾಳ್ ಬಿಜೆಪಿ ಸೇರ್ಪಡೆ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದವು. ಅದಕ್ಕಾಗಿಯೇ ಯತ್ನಾಳ್ ಅವರಿಂದ ಈ ಸಂದೇಶ ಎಂಬ ಮಾತುಗಳೂ ಕೂಡ ಕೇಳಿ ಬರುತ್ತಿವೆ.ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಯತ್ನಾಳ್ ಅವರನ್ನು ಈಗಾಗಲೇ ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಆದರೆ ಇದಕ್ಕೂ ಮುನ್ನ ಈ ಹಿಂದೆ ಎರಡು ಬಾರಿ ಪಕ್ಷದ ಉಚ್ಛಾಟನೆ ಶಿಕ್ಷೆಗೆ ಗುರಿಯಾಗಿದ್ದರು. 2009 ರಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಯತ್ನಾಳ್ ಅಮಾನತಾಗಿದ್ದರು.
