ಉದಯವಾಹಿನಿ, ಮುಂಬೈ: ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಟೂರ್ನಿಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಡಿಸೆಂಬರ್ 26ರ ಶನಿವಾರ ಭಾರತ ತಂಡವನ್ನು ಪ್ರಕಟಿಸಲಿದೆ. ಇದಕ್ಕೂ ಮುನ್ನ ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯ ನಡೆಯಲಿದೆ. ಇನ್ನು ಭಾರತ ತಂಡ ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಈ ಬಾರಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಹಾಲಿ ಚಾಂಪಿಯನ್ಸ್ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. 2024ರಿಂದ ಇಲ್ಲಿಯವರೆಗೆ ಭಾರತ ತಂಡ 34 ಪಂದ್ಯಗಳನ್ನಾಡಿದ್ದು, 30 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ನಾಲ್ಕು ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ.
ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಏಷ್ಯಾ ಕಪ್ ಟೂರ್ನಿಯಲ್ಲಿ ಶುಭ್‌ಮನ್ ಗಿಲ್ ತಂಡಕ್ಕೆ ಮರಳಿದ ಬಳಿಕ ಭಾರತದ ಅಗ್ರ ಕ್ರಮಾಂಕದಿಂದ ನಿರೀಕ್ಷಿತ ಪ್ರದರರ್ಶನ ಮೂಡಿ ಬರುತ್ತಿಲ್ಲ. ಅವರು 15 ಟಿ20 ಪಂದ್ಯಗಳನ್ನಾಡಿದ್ದು, ಕೇವಲ 291 ರನ್ ಕಲೆಹಾಕಿರುವ ಅವರ ಕಳಪೆ ಪ್ರದರ್ಶನ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿದೆ. ಆದರೆ, ಅವರ ಕಳಪೆ ಫಾರ್ಮ್ ನಡುವೆಯೂ ಅವರಿಗೆ ಆಯ್ಕೆ ಸಮಿತಿ ಮಣೆ ಹಾಕಲಿದೆ ಎನ್ನಲಾಗಿದೆ.
