ಉದಯವಾಹಿನಿ, ಬೆಂಗಳೂರು: ಟೀಮ್ ಇಂಡಿಯಾ ಅಭಿಮಾನಿಗಳಿಗೆ ಶುಭಸುದ್ದಿ. ಸ್ಟಾರ್ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ, ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಶೀಘ್ರವೇ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ಇತ್ತೀಚಿನ ವರದಿಗಳ ಮೂಲಕ ಬೆಳಕಿಗೆ ಬಂದಿದೆ. ಬೆನ್ನು ನೋವಿನ ಕಾರಣ 2022ರ ಸೆಪ್ಟೆಂಬರ್ 25ರಿಂದ ಬಲಗೈ ವೇಗದ ಬೌಲರ್ ಕ್ರಿಕೆಟ್ ಅಂಗಣದಿಂದ ಹೊರಗುಳಿದಿದ್ದಾರೆ. ಪದೇ ಪದೇ ಕಾಡುತ್ತಿದ್ದ ಬೆನ್ನು ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆದಿರುವ ಬುಮ್ರಾ ಇದೀಗ ಸಂಪೂರ್ಣ ಚೇತರಿಸಿದ್ದು, ಕಮ್‌ಬ್ಯಾಕ್ ಸಲುವಾಗಿ ಸಿದ್ಧತೆ ನಡೆಸಿದ್ದಾರೆ.
ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 209 ರನ್‌ಗಳ ಹೀನಾಯ ಸೋಲುಂಡ ಬಳಿಕ ಟೀಮ್ ಇಂಡಿಯಾ ಆಟಗಾರರಿಗೆ ಒಂದು ತಿಂಗಳ ವಿಶ್ರಾಂತಿ ಲಭ್ಯವಾಗಿದೆ. ಜುಲೈ ಮಧ್ಯದಲ್ಲಿ ಭಾರತ ತಂಡದ ಕ್ರಿಕೆಟ್ ಚಟುವಟಿಕೆಗಳು ಮತ್ತೆ ಶುರುವಾಗಲಿದೆ. ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡ ಟೆಸ್ಟ್, ಒಡಿಐ ಮತ್ತು ಟಿ20-ಐ ಸರಣಿಗಳನ್ನು ಆಡಲಿದೆ. ಈ ಪ್ರವಾಸದ ಬಳಿಕ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನಾಡಲು ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿ ಮೂಲಕ ಬುಮ್ರಾ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.
