ಉದಯವಾಹಿನಿ, ಮೋಗಾ: ಭಾರಿ ಮಳೆಗೆ ರಸ್ತೆ ಕೊಚ್ಚಿ ಹೋದ ಪರಿಣಾಮ ಶಾಲಾ ಮಕ್ಕಳಿಗೆ ದಾಟಲು ಗ್ರಾಮಸ್ಥರು ತಮ್ಮ ಪ್ರಾಣ ಪಣಕ್ಕಿಟ್ಟು ಸಹಾಯ ಮಾಡಿದ ಘಟನೆ ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ನಡೆದಿದೆ. ನಿಹಾಲ್ ಸಿಂಗ್ ವಾಲಾ ಪಟ್ಟಣದ ಗ್ರಾಮಸ್ಥರು ಮಳೆಯಿಂದ ತಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಾಶವಾಗಿದ್ದರಿಂದ, ಮಾನವೀಯತೆ, ಧೈರ್ಯ ಮತ್ತು ಒಗ್ಗಟ್ಟಿನ ಪ್ರದರ್ಶನ ನೀಡಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ಭಾರಿ ಮಳೆಗೆ ರಸ್ತೆ ಕೊಚ್ಚಿ ಹೋಗಿದ್ದಲ್ಲದೆ, ನೀರಿನಿಂದ ತುಂಬಿದ್ದ ರಸ್ತೆಯನ್ನು ದಾಟಲು ಗ್ರಾಮಸ್ಥರು ಶಾಲಾ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಇಬ್ಬರು ಯುವಕರು ರಸ್ತೆಗೆ ಅಡ್ಡಲಾಗಿ ಮಲಗಿದ್ದಾರೆ. ಯುವಕರ ಬೆನ್ನಿನ ಮೇಲೆ ಹತ್ತಿ ಶಾಲಾ ಮಕ್ಕಳು ಸುರಕ್ಷಿತವಾಗಿ ದಡ ತಲುಪುವುದನ್ನು ವಿಡಿಯೊದಲ್ಲಿ ನೋಡಬಹುದು. ಹಠಾತ್ ಪ್ರವಾಹದಿಂದ ಉಂಟಾದ ತೀವ್ರ ಅಡಚಣೆಯ ಹೊರತಾಗಿಯೂ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಗ್ರಾಮಸ್ಥರು ಕಾಳಜಿ ವಹಿಸಿದ್ದು ಎಲ್ಲರ ಮನಗೆದ್ದಿದೆ.
ವರದಿಗಳ ಪ್ರಕಾರ, ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿ ಹೊಲಗಳು ನಾಶವಾಗಿವೆ. ಗ್ರಾಮವನ್ನು ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆಯೂ ನಾಶವಾಯಿತು. ಮಕ್ಕಳು ಎಂದಿನಂತೆ ಶಾಲೆಗೆ ಹೋಗಿದ್ದರು. ಆದರೆ ಅವರು ಮನೆಗೆ ಹಿಂದಿರುಗಿದಾಗ, ತಮ್ಮ ದಾರಿ ಸಂಪರ್ಕ ಕಡಿತಗೊಂಡಿರುವುದರಿಂದ ಆತಂಕಕ್ಕೊಳಗಾದರು. ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ಮಕ್ಕಳಿಗೆ ಸಹಾಯ ಮಾಡಲು ಪೋಷಕರು ಮತ್ತು ಗ್ರಾಮಸ್ಥರು ತ್ವರಿತವಾಗಿ ಸಹಾಯ ಮಾಡಲು ಮುಂದಾದರು. ಅಧಿಕೃತ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಜನರು ಜಾಗರೂಕರಾಗಿರಲು ಮತ್ತು ಹಾನಿಗೊಳಗಾದ ರಸ್ತೆಗಳಲ್ಲಿ ಪ್ರಯಾಣಿಸದಂತೆ ಸೂಚಿಸಲಾಗಿದೆ.
