
ಉದಯವಾಹಿನಿ, ವಿಜಯಪುರ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸರ್ಕಾರಿ ಶಾಲೆಯೊಂದು ಜಲಾವೃತಗೊಂಡಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.ಮಂಗಳವಾರ ರಾತ್ರಿಯಿಂದ ಶುರುವಾದ ಮಳೆ ನಿರಂತರವಾಗಿ 12 ಗಂಟೆಗಳ ಕಾಲ ಸುರಿದಿದೆ. ಪರಿಣಾಮ ವಿಜಯಪುರ ಜಿಲ್ಲೆಯ ತಿಕೋಟ ಗ್ರಾಮದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯೊಂದು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಶಾಲಾ ಆವರಣ ಕೆರೆಯಂತಾಗಿದ್ದು, ಕೊಠಡಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ನೀರು ಹೊರಹಾಕಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ನೀರಿನ ಪ್ರಮಾಣದಲ್ಲಿ ಇಳಿಮುಖ ಕಂಡಿದೆ.
ಇನ್ನೂ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಕೆಲವೆಡೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮೆಕ್ಕೆಜೋಳ, ಜೋಳ, ಶೇಂಗಾ ಬೆಳೆಯುವ ರೈತರಿಗೆ ಸದ್ಯ ಮಳೆಯ ಅವಶ್ಯಕತೆ ಇತ್ತು. ಕೂಡ್ಲಿಗಿ ಹಾಗೂ ಸುತ್ತಮುತ್ತಲು ಭಾರೀ ಮಳೆ ಸುರಿದ ಪರಿಣಾಮ ದೊಡ್ಡ ಕೆರೆ ಕೋಡಿ ಬಿದ್ದಿದೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆಗಸ್ಟ್ ತಿಂಗಳಲ್ಲಿ ಕೆರೆ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
