ಉದಯವಾಹಿನಿ, ರಾಂಚಿ: ಕಳೆದ ಮೂರು ಐಪಿಎಲ್ ಆವೃತ್ತಿಯಲ್ಲಿ ಅತೀ ಹೆಚ್ಚು ಚರ್ಚಿತ ವಿಚಾರವೆಂದರೆ ಅದು ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ವಿದಾಯದ ಬಗ್ಗೆ. ಇದೀಗ ಧೋನಿ ಮುಂದಿನ ಐಪಿಎಲ್‌ನಲ್ಲಿ(IPL 2026) ಮುಂದುವರಿಯುತ್ತಾರಾ? ನಿವೃತ್ತಿ ತಗೊಳ್ತಾರಾ? ಈ ಕುತೂಹಲಕ್ಕೆ ಧೋನಿ ಉತ್ತರ ನೀಡಿದ್ದು, ಅಧಿಕೃತ ನಿರ್ಧಾರಕ್ಕೆ ಇನ್ನೂ ಐದಾರು ತಿಂಗಳು ಬೇಕು ಎಂದಿದ್ದಾರೆ. ಧೋನಿ ಡಿಸೆಂಬರ್ ಅಂತ್ಯದಲ್ಲಿ ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಮುಂದಿನ ಆವೃತ್ತಿಯ ಐಪಿಎಲ್ ಆಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಧೋನಿ, ಈ ವರ್ಷದ ಡಿಸೆಂಬರ್ ವೇಳೆಗೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಎಂದು ಸ್ಪಷ್ಟಪಡಿಸಿದರು. “ನಾನು ಆಡುತ್ತೇನೋ ಇಲ್ಲವೋ ಗೊತ್ತಿಲ್ಲ, ಆದರೆ ನಿರ್ಧರಿಸಲು ನನಗೆ ಸಮಯವಿದೆ. ಡಿಸೆಂಬರ್ ವರೆಗೆ, ನಾನು ಒಂದೆರಡು ತಿಂಗಳು ತೆಗೆದುಕೊಳ್ಳುತ್ತೇನೆ, ಮತ್ತು ನಂತರ ಅಂತಿಮವಾಗಿ ನಾನು ನನ್ನ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಮೊಣಕಾಲು ತನಗೆ ತೊಂದರೆ ನೀಡುತ್ತಿದೆ” ಎಂದು ಒಪ್ಪಿಕೊಂಡರು. ಹೀಗಾಗಿ ಧೋನಿ ಮುಂದಿನ ಆವೃತ್ತಿಯಲ್ಲಿ ಆಡುವುದು ಅನುಮಾನ.
ಇತ್ತಿಚೆಗಷ್ಟೇ ಧೋನಿ ಕಾರ್ಯಕ್ರಮವೊಂದರಲ್ಲಿ ನಾನು ಆಡುತ್ತಿರಲಿ ಅಥವಾ ಇಲ್ಲದಿರಲಿ, ಅದು ಬೇರೆ ವಿಷಯ. ಆದರೆ ಮುಂದಿನ 15-20 ವರ್ಷಗಳವರೆಗೆ ನಾನು ಮತ್ತು ಸಿಎಸ್‌ಕೆ ಒಟ್ಟಿಗೆ ಇರುತ್ತೇವೆ ಎಂದು ಹೇಳಿದ್ದರು. ಧೋನಿಯ ಈ ಮಾತುಗಳು ಕೇಳುವಾಗ ಅವರು ಚೆನ್ನೈ ತಂಡದ ಕೋಚ್ ಅಥವಾ ಮೆಂಟರ್ ಆಗಿ ತಂಡದೊಂದಿಗಿನ ನಂಟು ಮುಂದುವರಿಸುವ ಸಾಧ್ಯತೆಯೂ ಇದೆ.
ಐಪಿಎಲ್ 2025 ರಲ್ಲಿ ಎಂಎಸ್ ಧೋನಿ ಹೆಚ್ಚಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆದ್ಯತೆ ನೀಡಿದ್ದರು. ಸಿಎಸ್‌ಕೆ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅವರು ಈ ಋತುವಿನಲ್ಲಿ 14 ಪಂದ್ಯಗಳಲ್ಲಿ 13 ರಲ್ಲಿ ಬ್ಯಾಟಿಂಗ್ ಮಾಡಲು ಹೊರಬರಬೇಕಾಯಿತು. ಅವರು 24.5 ರ ಸರಾಸರಿಯಲ್ಲಿ ಮತ್ತು 135.17 ರ ಸ್ಟ್ರೈಕ್ ರೇಟ್‌ನಲ್ಲಿ 196 ರನ್ ಗಳಿಸಿದರು. ಗಾಯದಿಂದಾಗಿ ಋತುರಾಜ್ ಗಾಯಕ್ವಾಡ್ ಋತುವಿನ ಮಧ್ಯದಲ್ಲಿ ಹೊರಗುಳಿದ ನಂತರ ಅವರು ಕೆಲವು ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದರು.
