ಉದಯವಾಹಿನಿ, ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣದ ಅನಾಮಿಕನ ಹಿಂದೆ ಕಾಂಗ್ರೆಸ್‌ ಸಂಸದ ಶಶಿಕಾಂತ್‌ ಸೆಂಥಿಲ್‌ ಇದ್ದಾರೆ ಎಂದು ಉಡುಪಿಯ ಬಿಜೆಪಿ ಶಾಸಕ ಯಶ್‌ಪಾಲ್‌ ಸುವರ್ಣ ಸ್ಫೋಟಕ ಆರೋಪ ಮಾಡಿದ್ದಾರೆ.ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಈ ಷಡ್ಯಂತ್ರ ಮಾಡಿದವರ ಮೂಲಕ್ಕೆ ಹೋಗಬೇಕು. ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯ ಸಂಗತಿ ಬಯಲಾಗಲಿದೆ ಎಂದು ಹೇಳಿದರು.ಅಂದು ಬ್ರಿಟಿಷರು ಬಂದು ಹಿಂದೂಗಳನ್ನು ಒಡೆದು ಆಳಿದ್ದರು. ಈಗ ಕಮ್ಯೂನಿಸ್ಟರು ಹಿಂದೂ ಸಮಾಜದ ಒಳಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ದಬ್ಬಾಳಿಕೆ ಮಾಡಿ ಹಿಂದೂಗಳನ್ನು ಒಡೆಯಲು ಮುಂದಾಗುತ್ತಿದ್ದಾರೆ ಎಂದರು.
ದೇವರ ಸ್ಮರಣೆಯಿಂದ ನಮ್ಮ ದಿನ ಆರಂಭವಾಗುತ್ತದೆ. ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. ಈ ಷಡ್ಯಂತ್ರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ಗೃಹ ಸಚಿವರು ಸದನದಲ್ಲಿ ರಾಜಕೀಯವನ್ನು ಬಿಟ್ಟು ಸರಿಯಾದ ಉತ್ತರ ನೀಡಲಿ. ಧರ್ಮದ ವಿರುದ್ಧದ ಅವಹೇಳನ, ಷಡ್ಯಂತ್ರವನ್ನು ನಾವು ಸಹಿಸುವುದಿಲ್ಲ. ಮಂಜುನಾಥ ಸ್ವಾಮಿ ಎಲ್ಲಾ ಷಡ್ಯತ್ರಗಳಿಗೆ ಉತ್ತರ ಕೊಡುತ್ತಾನೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!