ಉದಯವಾಹಿನಿ, ಅಭಿಮಾನ್ ಸ್ಟುಡಿಯೋದಲ್ಲಿದ್ದ ದಾದಾ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮಗೊಳಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸೋಕೆ ನಿಮ್ಮ ಜೊತೆ ನಾವಿದ್ದೇವೆ ಎಂದು ನಟ ಅನಿರುದ್ಧ ವಿಷ್ಣು ಅಭಿಮಾನಿಗಳ ಪರವಾಗಿ ನಿಂತಿದ್ದಾರೆ.
ವಿಷ್ಣುವರ್ಧನ್ ಪುಣ್ಯ ಭೂಮಿ ಉಳಿವಿಗೆ ಹೋರಾಟ ಹಾಗೂ ಸಮಾಧಿ ನೆಲಸಮ ವಿಚಾರವಾಗಿ ಅನಿರುದ್ಧ ಅವರು ಇಂದು ಬೆಂಗಳೂರಿನ ಜಯನಗರದಲ್ಲಿರುವ ವಿಷ್ಣುವರ್ಧನ್ ನಿವಾಸದಲ್ಲಿ ಸಭೆ ನಡೆಸಿದರು. ಈ ವೇಳೆ ವಿಷ್ಣು ಅಭಿಮಾನಿಗಳು ಹಾಗೂ ಮಾಧ್ಯಮಗಳೊಂದಿಗೆ ಹಲವು ವಿಚಾರಗಳನ್ನ ಪ್ರಸ್ತಾಪಿಸಿದ್ರು.
ಅಭಿಮಾನ್ ಸ್ಟುಡಿಯೋದಲ್ಲಿ ನಡೆದ ಘಟನೆ ಖಂಡನೀಯ. ನಮಗೆಲ್ಲರಿಗೂ ದುಃಖ ಆಗಿದೆ. ನಮ್ಮ ಕುಟುಂಬದ ಮೇಲೆ ಒಂದಷ್ಟು ಜನ ಆರೋಪ ಮಾಡ್ತಿದ್ದಾರೆ. ಹೀಗಾಗಿ ಈ ಬಗ್ಗೆ ಮೊದಲು ನಾನು ಮಾತನಾಡುತ್ತೇನೆ. ಇದೇ ಮೊದಲ ಬಾರಿ ಅಲ್ಲ, ಇದಕ್ಕೂ ಮುನ್ನ ಸಾಕಷ್ಟು ಬಾರಿ ಸಭೆ ಮಾಡಿದ್ದೀನಿ. ಎರಡು ವಿಡಿಯೋ ಇದೆ, ಒಂದು ಮೈಸೂರಲ್ಲಿ ಸ್ಮಾರಕ ಉದ್ಘಾಟನೆಗೂ ಮುಂಚೆ ಹಾಗೂ ಹಳೆ ಮನೆಯಲ್ಲಿ ಸಭೆ ಮಾಡಿದ್ದೇವೆ ಎಂದು ವಿಡಿಯೋ ತೋರಿಸಿದರು.

ಇದೆಂಥಾ ವಿಕೃತ ಮನಸ್ಸು..?: ಸಮಾಧಿ ತೆರವು ವಿಚಾರ ನಮಗೆ ಗೊತ್ತಿತ್ತು, ಆ ವಿಚಾರದಲ್ಲಿ ದುಡ್ಡು ಬಂದಿದೆ ಅಂತೆಲ್ಲ ಕೆಲವರು ಹೇಳುತ್ತಿದ್ದಾರೆ. ಆದರೆ ದಾದಾ ಸಮಾಧಿ ತೆರವು ವಿಚಾರದಲ್ಲಿ ನಾವು ಸಂತೋಷಪಡೋಕೆ ಆಗುತ್ತಾ? ಇದೆಂಥಾ ವಿಕೃತ ಮನಸ್ಸು, ತಂದೆ ಸ್ಮಾರಕ ತೆರವುಗೊಳಿಸೋಕೆ ನಾವು ದುಡ್ಡು ತೆಗೆದುಕೊಳ್ತೀವಾ? ಈ ರೀತಿ ಒಂದಷ್ಟು ಜನ ಆರೋಪ ಮಾಡಿದ್ದಾರೆ. ಚಾಮರಾಜಪೇಟೆಯಲ್ಲಿ ಸಂಸ್ಕಾರ ಮಾಡೋಕೆ ಪ್ಲ್ಯಾನ್‌ ಮಾಡಿದ್ದೆವು. ಆದರೆ ಸರ್ಕಾರ ಹಾಗೂ ಅಂಬರೀಶ್ ಅವರ ಒತ್ತಾಯದಂತೆ ಅಭಿಮಾನ್ ಸ್ಟುಡಿಯೋದಲ್ಲಿ ಸಂಸ್ಕಾರ ಮಾಡಿದ್ವಿ. ಆದರೆ ಆ ಅವಸರದಲ್ಲಿ ಅದು ವಿವಾದಿತ ಜಾಗ ಅನ್ನೋದು ಅವ್ರಿಗೆ ಗೊತ್ತಾಗಿಲ್ಲ ಅನ್ನಿಸುತ್ತದೆ. 20 ಎಕರೆ ಜಾಗವನ್ನು ಸರ್ಕಾರ ಬಾಲಣ್ಣ ಅವರಿಗೆ ಕೊಟ್ಟಿತ್ತು. ಅದರಲ್ಲಿ 10 ಎಕರೆ ಜಾಗ ಮಾರಿಕೊಂಡಿದ್ದರು. ಉಳಿದ 10 ಎಕರೆ ಜಾಗದಲ್ಲಿ ಸ್ಟುಡಿಯೋ ಮಾಡ್ತೀವಿ ಎಂದು ಒಪ್ಪಿಕೊಂಡಿದ್ದರು. ಆದರೆ ಇದೆಲ್ಲವೂ ಅಕಸ್ಮಾತ್ ಆಗಲಿಲ್ಲ, ಸರ್ಕಾರ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ತೀವಿ ಎಂದು ಉಲ್ಲೇಖ ಮಾಡಿದೆ. ನಾವು ಸ್ಮಾರಕ ಮಾಡ್ಬೇಕು ಅಂದರೆ, 2 ಎಕರೆ ಜಾಗ ಬೇಕು. ಆದರೆ ಜಾಗದ ಗಲಾಟೆ ಇತ್ಯರ್ಥ ಆಗಲಿಲ್ಲ. ಗೀತಾ ಬಾಲಿ ಅವರನ್ನು ಸಾಕಷ್ಟು ಬಾರಿ ಕೇಳಿಕೊಂಡ್ವಿ. ಅವರು ಇತ್ಯರ್ಥ ಮಾಡಬೇಕಂದ್ರೆ ಕೇಸ್ ವಿಥ್ ಡ್ರಾ ಮಾಡ್ಬೇಕು. ಒಂದು ವೇಳೆ ವಿಥ್ ಡ್ರಾ ಮಾಡಿಕೊಂಡರೆ ಅವರ ಸಹೋದರರು ಜಾಗ ಕಿತ್ತುಕೊಳ್ಳುತ್ತಾರೆ ಎನ್ನುವ ಭಯ ಅವರಿಗಿತ್ತು ಅನಿಸುತ್ತದೆ ಎಂದು ಸ್ಪಷ್ಟನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!