ಉದಯವಾಹಿನಿ, ಮುಂಬೈ: ಜಾಗತಿಕ ಮಾರುಕಟ್ಟೆಯ ದುರ್ಬಲ ಪರಿಸ್ಥಿತಿಯಿಂದಾಗಿ ಮಂಗಳವಾರ ಸ್ಟಾಕ್ ಮಾರ್ಕೆಟ್‌ನಲ್ಲಿ ಅಪಾರ ಪ್ರಮಾಣದ ನಷ್ಟವಾಗಿದೆ. ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 500 ಅಂಕ ಪತನವಾಗಿದ್ದು, 84,679ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದರೆ ನಿಫ್ಟಿ ಸೂಚ್ಯಂಕವು 167 ಅಂಕ ಇಳಿಕೆಯಾಗಿ 25,860ಕ್ಕೆ ಸ್ಥಿರವಾಯಿತು.ಹೂಡಿಕೆದಾರರು ಸುಮಾರು 4 ಲಕ್ಷ ಕೋಟಿ ರುಪಾಯಿಗಳ ನಷ್ಟ ಅನುಭವಿಸಿದರು. ಯುರೋಪ್ ಮತ್ತು ಏಷ್ಯಾದ ನಾನಾ ಸ್ಟಾಕ್ ಮಾರ್ಕೆಟ್‌ಗಳಲ್ಲಿ ಷೇರು ಸೂಚ್ಯಂಕಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 471 ಲಕ್ಷ ಕೋಟಿ ರುಪಾಯಿಗಳಿಂದ 467 ಲಕ್ಷ ಕೋಟಿ ರುಪಾಯಿಗೆ ಇಳಿಯಿತು. ಎಚ್‌ಸಿಎಲ್ ಟೆಕ್, ಟಾಟಾ ಸ್ಟೀಲ್ ಷೇರು ದರ ತಲಾ 2 ಪರ್ಸೆಂಟ್ ಇಳಿಯಿತು. ಎಕ್ಸಿಸ್ ಬ್ಯಾಂಕ್ ಷೇರಿನ ದರದಲ್ಲಿ ಇವತ್ತು ಶೇ. 5 ತಗ್ಗಿತು. ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಬ್ಯಾಂಕ್‌ನ ಬಡ್ಡಿ ಅದಾಯ ಇಳಿಯಬಹುದು ಎಂಬ ಸಿಟಿ ಬ್ರೋಕರೇಜ್ ವರದಿ ನಕಾರಾತ್ಮಕ ಪ್ರಭಾವ ಬೀರಿತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 91 ರುಪಾಯಿಗೆ ಇಳಿಕೆಯಾಗಿದೆ. ಇದು ಡೊಮೆಸ್ಟಿಕ್ ಮಾರುಕಟ್ಟೆಯ ರಿಕವರಿಗೆ ಸಮಸ್ಯೆ ಆಗಬಹುದೇ ಎಂಬ ಆತಂಕ ಹೂಡಿಕೆದಾರರಲ್ಲಿ ಉಂಟಾಗಿತ್ತು. ಇದರ ಪರಿಣಾಮ ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರ ಹರಿವು ಹೆಚ್ಚಿನ ಪ್ರಮಾಣದಲ್ಲಿತ್ತು.
ಅಮೆರಿಕ ಮತ್ತು ಭಾರತದ ನಡುವಿನ ಟ್ರೇಡ್ ಡೀಲ್ ಮುಕ್ತಾಯವಾಗೇಕಿದೆ. ರುಪಾಯಿಯ ಸ್ಥಿರತೆಯನ್ನು ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ ಎಂದು ಜಿಯೊಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.
