ಉದಯವಾಹಿನಿ, ಬಿಗ್‍ಬಾಸ್ ಮಾಜಿ ಸ್ಪರ್ಧಿ ನಟ ಉಗ್ರಂ ಮಂಜು ಮದುವೆ ದಿನಾಂಕ ಫಿಕ್ಸ್ ಆಗಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಸಾಯಿಸಂಧ್ಯಾ ಜೊತೆ ರಹಸ್ಯ ನಿಶ್ಚಿತಾರ್ಥವಾಗಿದ್ದ ಅವರು ಇತ್ತೀಚೆಗೆ ಬ್ಯಾಚುಲರೇಟ್ ಪಾರ್ಟಿಗಾಗಿ ಬಿಗ್‍ಬಾಸ್ ಹಾಲಿ ಸೀಸನ್‍ಗೂ ಕಾಲಿಟ್ಟಿದ್ದರು. ಇದೀಗ ಸರಳವಾಗಿ ದೇವಸ್ಥಾನದಲ್ಲಿ ಇದೇ ಬರುವ ಜ.23 ರಂದು ಮದುವೆಯಾಗಲು ನಿಶ್ಚಯವಾಗಿದೆ.
ಉಗ್ರಂ ಮಂಜು ಸಾಯಿಸಂಧ್ಯಾ ಜೊತೆ ಹೊಸೂರಿನ ತಿಮ್ಮರಾಯಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಇದು ಉಗ್ರಂ ಮಂಜು ಮನೆ ದೇವರ ದೇವಸ್ಥಾನವೂ ಆಗಿದ್ದು ಇಲ್ಲೇ ಮದುವೆಯಾಗಲು ಗುರೂಜಿ ಸೂಚಿಸಿದ್ದರಂತೆ. ಅದರ ಪ್ರಕಾರ ಕೆಲವೇ ಕೆಲವು ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ದೇವಸ್ಥಾನದಲ್ಲಿ ಉಗ್ರಂ ಮುಂಜು ವಿವಾಹವಾಗಲಿದ್ದಾರೆ.
ಸರಳವಾಗಿ ಮದುವೆಯಾಗ್ತಿರೋದಕ್ಕೆ ಕಾರಣ ಹೇಳಿರುವ ಅವರು “ನಮ್ಮ ಆಸೆಯಂತೆ ದೇವರ ಆಶೀರ್ವಾದ ಪಡೆದು, ಕುಟುಂಬಸ್ಥರು ಮತ್ತು ಕೆಲ ಆಪ್ತರ ಸಮ್ಮುಖದಲ್ಲಿ ವಿವಾಹವಾಗಲಿದ್ದೇವೆ. ನನಗೂ ನನ್ನ ಭಾವಿ ಪತ್ನಿಗೂ ಆಡಂಬರ ಅಷ್ಟೊಂದು ಇಷ್ಟ ಇಲ್ಲ. ಜೊತೆಗೆ ಮದುವೆಗೆ ಅಂತ ಅಷ್ಟೆಲ್ಲಾ ಖರ್ಚು ಮಾಡಿ, ಅದರ ಬಗ್ಗೆಯೇ ಯೋಚನೆ ಮಾಡಿ, ಅದನ್ನ ತೀರಿಸೋಕೆ ಕಷ್ಟಪಡುವುದು, ಟೆನ್ಷನ್ ಅದೆಲ್ಲಾ ಬೇಡ ಅನ್ನೋದು ನಮ್ಮ ಯೋಚನೆ” ಎಂದಿದ್ದಾರೆ. ಉಗ್ರಂ ಮಂಜು ಈ ನಡೆ ಹಲವರಿಗೆ ಇಷ್ಟವಾಗಿದೆ. ಸೆಲೆಬ್ರಿಟಿಯಾದ್ರೂ ಸರಳತೆಗೆ ಒತ್ತು ಕೊಟ್ಟಿರುವುದ ಮಾದರಿ ಕೆಲಸ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
