ಉದಯವಾಹಿನಿ, ನವದೆಹಲಿ: ಗಗನಯಾತ್ರಿ ಶುಭಾಂಶು ಶುಕ್ಲಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ನಂತರ ಮೊದಲ ಬಾರಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ತಾಯ್ನಾಡಿಗೆ ಮರಳಿದ್ದಾರೆ. ಅಮೆರಿಕದಿಂದ ಮಧ್ಯರಾತ್ರಿ 1:30ರ ವೇಳೆಗೆ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾಗೆ ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಸಿಎಂ ರೇಖಾ ಗುಪ್ತಾ, ಶುಭಾಂಶು ಶುಕ್ಲಾರನ್ನ ಬರಮಾಡಿಕೊಂಡರು. ಶುಕ್ಲಾ ಇಂದು ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ. ಬಳಿಕ, ತಮ್ಮ ತವರು ಲಕ್ನೋಗೆ ಪ್ರಯಾಣಿಸುವ ಸಾಧ್ಯತೆ ಇದೆ.
ಆಕ್ಸಿಯಂ-4 ಮಿಷನ್‍ಗಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದ ಶುಕ್ಲಾ, 2027ರಲ್ಲಿ ಇಸ್ರೋ ತನ್ನ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಎದುರು ನೋಡುತ್ತಿರುವುದರಿಂದ ತಮ್ಮ ಅನುಭವಗಳನ್ನು ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಆಗಸ್ಟ್ 22-23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಲು ಅವರು ದೆಹಲಿಗೆ ಹಿಂದಿರುಗುತ್ತಾರೆ ಎಂದು ಹೇಳಲಾಗಿದೆ.
