ಉದಯವಾಹಿನಿ,ಮೊಳಕಾಲ್ಮುರು: ಬಹುವರ್ಷಗಳ ಬೇಡಿಕೆ ನಂತರ ಮಂಜೂರಾಗಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಕಾಮಗಾರಿ ಒಂದು ತಿಂಗಳಿನಿಂದ ಸ್ಥಗಿತವಾಗಿದೆ. ಹಳೆ ತಾಲ್ಲೂಕು ಕಚೇರಿಯ ಜಾಗದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸುವ ವಿಚಾರ ಗೊಂದಲಕ್ಕೆ ಕಾರಣವಾಗಿದೆ. 1.01 ಎಕರೆ ವಿಸ್ತೀರ್ಣದ ಹಳೆ ತಾಲ್ಲೂಕು ಕಚೇರಿ ಜಾಗವನ್ನು ₹58 ಲಕ್ಷಕ್ಕೆ ಸಾರಿಗೆ ಇಲಾಖೆ ಖರೀದಿಸಿ ₹5 ಕೋಟಿ ವೆಚ್ಚದಲ್ಲಿ ನಿಲ್ದಾಣ ನಿರ್ಮಿಸಲು ಮುಂದಾಗಿತ್ತು. ಶ್ರೀರಾಮುಲು ಅವರು 2023 ಫೆ.11ರಂದು ಶಂಕುಸ್ಥಾಪನೆ ಮಾಡಿದ್ದರು. ಒಂದು ವರ್ಷ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ನೀಡಲಾಗುವುದು ಎಂದು ತಿಳಿಸಿದ್ದರು.
ಬಸ್ ನಿಲ್ದಾಣ ನಿರ್ಮಾಣಕ್ಕಾಗಿ, ಹಳೆ ತಾಲ್ಲೂಕು ಕಚೇರಿಯನ್ನು ನೆಲಸಮ ಮಾಡುವ ಕಾರ್ಯ ಪ್ರಗತಿಯಲ್ಲಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಸ್ಥಗಿತವಾಗಿದೆ. ಹಳೆ ತಾಲ್ಲೂಕು ಕಚೇರಿಯ ಜಾಗವು ಬಸ್ ನಿಲ್ದಾಣಕ್ಕೆ ಸಾಲುವುದಿಲ್ಲ, ಈ ಬಗ್ಗೆ ಒಮ್ಮೆ ಪರಿಶೀಲಿಸಿ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಸೂಚಿಸಿದ್ದ ಕಾರಣ, ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತ ಮಾಡಲಾಗಿದೆ ಕೆಎಸ್‌ಆರ್‌ಟಿಸಿ ಎಂಜಿನಿಯರ್ ನಾಗರಾಜ್ ಹೇಳಿದರು.
