ಉದಯವಾಹಿನಿ, ಮುಂಬೈ: ಬಾಲಿವುಡ್‌ನ 3 ಈಡಿಯಟ್ಸ್ (3 idiots) ಸಿನಿಮಾದಲ್ಲಿ ಪ್ರಾಧ್ಯಾಪಕನ ಪಾತ್ರದಿಂದ ಪ್ರಸಿದ್ಧರಾದ ಹಿರಿಯ ನಟ ಅಚ್ಯುತ ಪೋತರ್ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ನಟ ಥಾಣೆಯ ಜುಪಿಟರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 19 ರಂದು ಥಾಣೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಸಿನಿಮಾದಲ್ಲಿ ತಮ್ಮ ಛಾಪು ಮೂಡಿಸುವ ಮೊದಲು, ಅಚ್ಯುತ ಪೋತರ್ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಇಂಡಿಯನ್ ಆಯಿಲ್ ಕಂಪನಿಯಲ್ಲಿಯೂ ಕೆಲಸ ಮಾಡಿದರು. ನಟನೆಯ ಮೇಲಿನ ಅವರ ಉತ್ಸಾಹದಿಂದ 1980 ರ ದಶಕದಲ್ಲಿ ಚಲನಚಿತ್ರಗಳು ಮತ್ತು ದೂರದರ್ಶನಕ್ಕೆ ಬಂದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಟನೆಯಲ್ಲಿ ವೃತ್ತಿಜೀವನ ನಡೆಸಿದ್ದರು.
ಪೋತರ್ ಹಿಂದಿ ಮತ್ತು ಮರಾಠಿ ಸಿನಿಮಾದಲ್ಲಿ 125 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ರೋಶ್, ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೋಂ ಆತಾ ಹೈ, ಅರ್ಧ ಸತ್ಯ, ತೇಜಾಬ್, ಪರಿಂದಾ, ರಾಜು ಬನ್ ಗಯಾ ಜಂಟಲ್‌ಮ್ಯಾನ್, ದಿಲ್ವಾಲೆ, ರಂಗೀಲಾ, ವಾಸ್ತವ್, ಹಮ್ ಸಾಥ್ ಸಾಥ್ ಹೇ, ಪರಿಣೀತಾ, ಲಗೇ ರಹೋ ಮುನ್ನಾಭಾಯಿ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ರಾಜ್‌ಕುಮಾರ್ ಹಿರಾನಿಯವರ ಬ್ಲಾಕ್‌ಬಸ್ಟರ್ ಚಲನಚಿತ್ರ 3 ಈಡಿಯಟ್ಸ್‌ನಲ್ಲಿ ಕಟ್ಟುನಿಟ್ಟಾದ ಎಂಜಿನಿಯರಿಂಗ್ ಪ್ರಾಧ್ಯಾಪಕನ ಪಾತ್ರವನ್ನು ನಿರ್ವಹಿಸುವ ಮೂಲಕ ಅವರು ಮನೆಮಾತಾದರು. ಅವರ ‘ಕೆಹ್ನಾ ಕ್ಯಾ ಚಾಹತೇ ಹೋ’ ಎಂಬ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿದ್ದು, ಸೋಷಿಯಲ್ ಮೀಡಿಯಾ ಮತ್ತು ಮೀಮ್‌ಗಳಲ್ಲಿ ಇದನ್ನು ಇನ್ನೂ ಹೆಚ್ಚಾಗಿ ಬಳಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!