ಉದಯವಾಹಿನಿ, ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮೇ ತಿಂಗಳಿನಿಂದಲ್ಲೇ ನಿರಂತರ ಮಳೆಯಾಗುತ್ತಿರುವುದರಿಂದ ನಾನಾ ರೀತಿಯ ಅವಾಂತರ ಮುಂದುವರೆದಿದೆ. ಅಲ್ಲದೆ ಸುರಿಯುತ್ತಿರುವ ಮಳೆಯ ಪರಿಣಾಮ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕಿನ ಹಲವಾರು ಭಾಗದಲ್ಲಿ ಕಾಫಿ ಬೆಳೆಗಳು ನೆಲಕಚ್ಚಿದೆ. ಕಾಫಿ ತೋಟಗಳು ಸಂಪೂರ್ಣವಾಗಿ ಹಾಳಾಗಿದ್ದು ಈ ವರ್ಷ ಹಾಗೂ ಮುಂದಿನ ವರ್ಷಕ್ಕೆ ಬೆಳೆಯೇ ಇಲ್ಲದಂತಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.
ಕಾಫಿ ಬೆಳೆಗಾರರ ಸ್ಥಿತಿಯನ್ನ ಅರಿತ ಕೊಡಗಿನ ಬಿಜೆಪಿ ನಿಯೋಗ ಕಾಫಿ ತೋಟಗಳಲ್ಲಿ ಸರ್ವೇ ಕಾರ್ಯ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವರದಿ ನೀಡಲು ಮುಂದಾಗಿದೆ.
ಜಿಲ್ಲೆಯಲ್ಲಿ ಈ ಬಾರಿ ದೀರ್ಘಾವಧಿ ಮಳೆ ಆಗಿರುವುದರಿಂದ ಪ್ರಮುಖ ಬೆಳೆ ಕಾಫಿ ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳಿಗೂ ಕೊಳೆ ರೋಗದ ಸಮಸ್ಯೆ ಎದುರಾಗಿದೆ. ಅತಿಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಈಗಾಗಲೇ ಕಾಫಿ ಉದುರಲಾರಂಭಿಸಿದೆ. ಇದರಿಂದ ಈ ಬಾರಿ ಜಿಲ್ಲೆಯಲ್ಲಿ ಕಾಫಿ ಉತ್ಪಾದನೆದು ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ಜಿಲ್ಲೆಯಲ್ಲಿ ಶೀತಗಾಳಿ ಹೆಚ್ಚಾಗಿರುವ ಪರಿಣಾಮ ತೋಟಗಾರಿಕಾ ಬೆಳೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ. ಮುಖ್ಯವಾಗಿ ಕಾಫಿ ಬೆಳೆ ಗಾರರಿಗೆ ಬೆಳೆ ನಷ್ಟದ ಭೀತಿ ಎದುರಾಗಿದೆ.
