ಉದಯವಾಹಿನಿ, ಬೆಂಗಳೂರು: ಸಿನಿಮಾ ರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪ್ರತೀ ವರ್ಷವು ನೀಡಲಾಗುತ್ತದೆ. ಅಂತಹ ಪುರಸ್ಕಾರಗಳಲ್ಲಿ ಸೈಮಾ ಕೂಡ ಒಂದು. ಸೌತ್ ಇಂಡಿಯನ್‌ ಇಂಟರ್‌ ನ್ಯಾಷನಲ್ ಮೂವಿ ಅವಾರ್ಡ್ (SIIMA) ಪ್ರಶಸ್ತಿ ಪ್ರದಾನ ಸಮಾರಂಭವು ಈ ಬಾರಿ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. 2024ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ, ತಾರೆಯರಿಗೆ ಹಾಗೂ ತಂತ್ರ ಜ್ಞರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸೈಮಾ 2025 ಕಾರ್ಯಕ್ರಮದಲ್ಲಿ ಕನ್ನಡ ತಾರೆಯರನನು ಕಡೆಗಣಿಸಲಾಗಿದೆ ಎಂದು ನಟ ದುನಿಯಾ ವಿಜಯ್ (Duniya Vijay) ವೇದಿಕೆ ಮೇಲೆಯೇ ಸೈಮಾ ಆಯೋಜಕರ ವಿರುದ್ದ ತಮ್ಮ ಅಸಮಾಧಾನವನ್ನ ಹೊರಹಾಕಿದ್ದರು. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಸೈಮಾ ಸಂಸ್ಥಾಪಕರು ನಟ ದುನಿಯಾ ವಿಜಯ್ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ‌.

ನಟ ದುನಿಯಾ ವಿಜಯ್ ಸೈಮಾ ಪ್ರಶಸ್ತಿ ವಿಚಾರವಾಗಿ ಬಹಿರಂಗವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್‌ 5 ಹಾಗೂ 6ರಂದು ದುಬೈಯಲ್ಲಿ ಸೈಮಾ ಅವಾರ್ಡ್ಸ್ 2025 ಸಮಾರಂಭ ನಿನಡೆಯಿತು. ಸೆಪ್ಟೆಂಬರ್ 5ರಂದು ತೆಲುಗು ಹಾಗೂ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಮೊದಲು ತೆಲುಗು ಸಿನಿಮಾ ತಾರೆಯರಿಗೆ ವಿತರಿಸಲಾಯಿತು. ಅದು ಮುಗಿಯುವಾಗಲೇ ತುಂಬಾ ತಡವಾಗಿತ್ತು. ಹೀಗಾಗಿ ಎಷ್ಟೋ ಸೆಲೆಬ್ರಿಟಿಗಳು ಸಮಾರಂಭದಿಂದ ಅರ್ಧಕ್ಕೆ ನಿರ್ಗಮಿಸಿದ್ದರು. ಬಹುತೇಕ ಸಭಾಂಗಣ ಖಾಲಿಯಾದ ಮೇಲೆ ಕನ್ನಡ ತಾರೆಯರಿಗೆ ಪ್ರಶಸ್ತಿ ವಿತರಿಸಿದ್ದರ ಬಗ್ಗೆ ನಟ ದುನಿಯಾ ವಿಜಯ್ ಅಸಮಧಾನಗೊಂಡಿದ್ದಾರೆ.

ʼʼಯಾರೂ ಇಲ್ಲದೆ ಇದ್ದಾಗ ವೇದಿಕೆಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡೋದು ಎಷ್ಟರ ಮಟ್ಟಿಗೆ ಸರಿ? ನಮ್ಮ ಭಾಷೆಯೂ ಕೂಡ ಉತ್ತಮ ಸ್ಥಾನದಲ್ಲಿದೆ. ಅದನ್ನು ಯಾರು ಕೆಳಗಿಳಿಸುವ ಪ್ರಯತ್ನ ಮಾಡಬೇಡಿ. ಕನ್ನಡದಲ್ಲಿಯೂ ಯುವ ಕಲಾವಿದರು ಇದ್ದಾರೆ ಅವರನ್ನು ಗುರುತಿಸಿ ಪ್ರೋತ್ಸಾಹಿಸಿ, ಇದು ಹೀಗೆ ಮುಂದುವರಿದರೆ ಮುಂದಿನ ಸೈಮಾಗೆ ನಾವ್ಯಾರೂ ಬರುವುದಿಲ್ಲʼʼ ಅಂತ ದುನಿಯಾ ವಿಜಯ್ ವೇದಿಕೆ ಮೇಲೆಯೇ ಆಕ್ರೋಶ ಹೊರಹಾಕಿದ್ದರು. ಇದೀಗ ಸೈಮಾ ಸಂಸ್ಥಾಪಕ ವಿಷ್ಣುವರ್ಧನ್ ಇಂದೂರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ʼʼಸೈಮಾ ಪ್ರಶಸ್ತಿ ಬಗ್ಗೆ ನಟರೊಬ್ಬರು ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿದೆ. ಆದರೆ ಅವರು ಹೇಳುವಂತೆ ಕನ್ನಡ ಸಿನಿಮಾ ರಂಗವನ್ನು ನಾವು ಎಂದಿಗೂ ಕೆಟ್ಟದಾಗಿ ನಡೆಸಿಕೊಂಡಿಲ್ಲ. ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳ ಬಗ್ಗೆ ನಮಗೆ ಅಪಾರ ಗೌರವ ಇದೆ. ಕಳೆದ 13ವರ್ಷದಿಂದಲೂ ಅವರನ್ನು ಸಮಾನವಾಗಿ ನಡೆಸಿಕೊಂಡಿದ್ದೇವೆ. ಅಪಾರ ಸವಾಲುಗಳ ಹೊರತಾಗಿಯೂ, ನಾಲ್ಕು ದಕ್ಷಿಣ ಭಾರತದ ಭಾಷೆಗಳನ್ನು ಸಮಾನವಾಗಿ ಗೌರವಿಸುತ್ತ ಅವರ ಸಿನಿಮಾವನ್ನು ಪ್ರೋತ್ಸಾಹಿಸುವ ದೊಡ್ಡ ವೇದಿಕೆಯೊಂದು ಇದ್ದರೆ ಅದುವೆ ಸೈಮಾʼʼ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!