ಉದಯವಾಹಿನಿ, ನವದೆಹಲಿ: ಏಷ್ಯಾ ಕಪ್ ಟಿ20 ಟೂರ್ನಮೆಂಟ್‌ನ ಭಾಗವಾಗಿ ಸೆಪ್ಟೆಂಬರ್ 14 ರಂದು ನಿಗದಿಯಾಗಿರುವ ಭಾರತ-ಪಾಕಿಸ್ತಾನ( ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಪಂದ್ಯವನ್ನು ಆಯೋಜಿಸುವುದು “ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ” ಮತ್ತು ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸಶಸ್ತ್ರ ಪಡೆಗಳು ಮತ್ತು ನಾಗರಿಕರ ತ್ಯಾಗವನ್ನು ಅವಮಾನಿಸುತ್ತದೆ. ಹೀಗಾಗಿ ಪಂದ್ಯವನ್ನು ರದ್ದು ಮಾಡಬೇಕು ಎಂದು ನಾಲ್ವರು ಕಾನೂನು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
‘ಕ್ರಿಕೆಟ್ ಪಂದ್ಯವನ್ನು ಭಾನುವಾರಕ್ಕೆ ನಿಗದಿಪಡಿಸಲಾಗಿದೆ. ನಮ್ಮ ಅರ್ಜಿಯನ್ನು ಶುಕ್ರವಾರದಂದು ತುರ್ತು ವಿಚಾರಣೆಗೆ ಪಟ್ಟಿ ಮಾಡದಿದ್ದರೆ ನಿಷ್ಪ್ರಯೋಜಕವಾಗುತ್ತದೆ ಎಂದು ವಕೀಲರು ತಿಳಿಸಿದ್ದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಮಹೇಶ್ವರಿ, ‘ಏನು ಆತುರ? ಇದು ಭಾನುವಾರ ನಡೆಯಲಿರುವ ಪಂದ್ಯವಾಗಿದ್ದು, ಈಗ ನಾವು ಏನು ಮಾಡಬಹುದು?, ಪಂದ್ಯ ನಡೆಯಲಿ ಬಿಡಿ’ ಎಂದು ಹೇಳಿದ್ದಾರೆ.
