ಉದಯವಾಹಿನಿ, ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ನೂತನ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟಿಗೆ ಕುಳಿತಿರುವ ಫೋಟೊವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಂಚಿಕೊಂಡಿದ್ದಾರೆ. ಇವರ‍್ಯಾರೂ ರಾಜವಂಶಸ್ಥರಲ್ಲ, ಸ್ವಂತ ಪರಿಶ್ರಮದಿಂದ ಮೇಲೆ ಬಂದವರು ಎಂದು ಬಣ್ಣಿಸಿದ್ದಾರೆ.
ಇವರಿಗೆ ತಮ್ಮ ಹಕ್ಕುಗಳ ಪ್ರಜ್ಞೆಯೂ ಇಲ್ಲ. ಮೂವರೂ ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಹಿಂದುಳಿದ ಸಮುದಾಯದಿಂದ ಬಂದವರು. ಜೀವನದ ಪ್ರತಿಯೊಂದು ಹಂತದಲ್ಲೂ ಮೆಟ್ಟಿಲುಗಳನ್ನು ಏರಿ ಬಂದಿದ್ದಾರೆ. ಅದು ಭಾರತದ ಪ್ರಜಾಪ್ರಭುತ್ವ ಮತ್ತು ನಾಗರಿಕತೆಯ ಶಕ್ತಿ ಎಂದು ಬಿಎಲ್ ಸಂತೋಷ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಚಿಕ್ಕ ವಯಸ್ಸಿನಲ್ಲಿ ಟೀ ಮಾರುತ್ತಿದ್ದ ವ್ಯಕ್ತಿ ಈಗ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕರ್ತನಾಗಿ, ರಾಜಕೀಯ ನಾಯಕನಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದವರು. ತುರ್ತು ಪರಿಸ್ಥಿತಿ ಸೇರಿ ಆಗಿನ ಕೇಂದ್ರ ಸರ್ಕಾರದ ಹಲವಾರು ಕ್ರಮಗಳ ವಿರುದ್ಧದ ಹೋರಾಟಗಳಲ್ಲೂ ಭಾಗಿಯಾಗಿದ್ದರು. ಸತತ ಮೂರು ಅವಧಿಗೆ ಪ್ರಧಾನಿಯಾಗಿ ದಾಖಲೆ ಕೂಡ ಬರೆದಿದ್ದಾರೆ.
