ಉದಯವಾಹಿನಿ, ನವದೆಹಲಿ: ಆದಾಯ ನಷ್ಟ ತಡೆಯಲು ಚಿಂತನೆ ನಡೆಸಿರುವ ದೆಹಲಿ ರಾಜ್ಯ ಸರ್ಕಾರ ಹೊಸ ಮದ್ಯ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ. ಅದರ ಪ್ರಕಾರ, ಬಿಯರ್ ಕುಡಿಯುವ ಕಾನೂನು ಬದ್ಧ ವಯಸ್ಸನ್ನು 25 ರಿಂದ 21 ವರ್ಷಕ್ಕೆ ಇಳಿಸಲು ಪ್ಲ್ಯಾನ್ ಮಾಡಿದೆ.
ಮೂಲಗಳ ಪ್ರಕಾರ, ಇತ್ತೀಚೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ದೆಹಲಿ ಸರ್ಕಾರ ಈ ಬಗ್ಗೆ ಚರ್ಚಿಸಿದೆ. ದೆಹಲಿ ಸುತ್ತಮುತ್ತಲಿನ ಪ್ರದೇಶಗಳಾದ ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ಗಳಲ್ಲಿ ಈಗಾಗಲೇ ಬಿಯರ್ ಕುಡಿಯುವ ಕಾನೂನುಬದ್ಧ ವಯೋಮಿತಿಯನ್ನ 21 ವರ್ಷಕ್ಕೆ ಇಳಿಸಲಾಗಿದೆ. ದೆಹಲಿಯಲ್ಲೂ ವಯೋಮಿತಿ ಕಡಿಮೆ ಮಾಡುವುದರಿಂದ ಅಕ್ರಮ ಮದ್ಯ ಮಾರಾಟ ತಪ್ಪುತ್ತದೆ. ಜೊತೆಗೆ ಬ್ಲ್ಯಾಕ್ ಮಾರ್ಕೆಟ್ ಅನ್ನೂ ನಿಯಂತ್ರಿಸಬಹುದು ಎಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ.
ಇದಲ್ಲದೇ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ಅಂಗಡಿಗಳನ್ನ ನಡೆಸಲು ಹೈಬ್ರಿಡ್ ಮಾದರಿ ಅನುಸರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅಂದ್ರೆ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಾರಾಟ ನಡೆಯಬೇಕು. ಪ್ರಸ್ತುತ, ದೆಹಲಿಯಲ್ಲಿ ಕೇವಲ 4 ಸರ್ಕಾರಿ ನಿಗಮಗಳು ಮಾತ್ರ ಮದ್ಯದ ಅಂಗಡಿಗಳನ್ನು ನಡೆಸುತ್ತಿವೆ. ಹೀಗಾಗಿ ಸರ್ಕಾರಿ ಮಾರಾಟಗಾರರ ಜೊತೆಗೆ ಖಾಸಗಿ ಸಹಭಾಗಿತ್ವ ತೊಡಗಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ.
