ಉದಯವಾಹಿನಿ, ಕೊಚ್ಚಿ: ಹೋರಾಟವನ್ನೇ ಬದುಕಾಗಿಸಿಕೊಂಡವರಿಗೆ ಯಾವುದು ಕೂಡ ಕಷ್ಟವಲ್ಲ ಎಂಬುದನ್ನು ಕೇರಳದ (Kerala) ಲತೀಶ್ (Latheesh) ತೋರಿಸಿಕೊಟ್ಟಿದ್ದಾರೆ. ಸಾವಿರಾರು ಮೂಳೆ ಮುರಿತಗೊಂಡಿದ್ದರೂ ಆಮ್ಲಜನಕದ ಬೆಂಬಲವಿಲ್ಲದೆ ಅತ್ತಿಂದಿತ್ತ ಹೋಗಲು ಸಾಧ್ಯವಾಗದ ಸ್ಥಿತಿ ಇದ್ದರೂ ಕೂಡ ಇವರು ಐಎಎಸ್ ಅಧಿಕಾರಿಯಾಗುವ ಕನಸಿನೊಂದಿಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (Union Public Service Commission) ಪರೀಕ್ಷೆ ಬರೆದಿದ್ದಾರೆ. ಅಪರೂಪದ ಕಾಯಿಲೆಯೊಂದಿಗೆ ಹೋರಾಡುತ್ತಿದ್ದರೂ ಇದಕ್ಕಾಗಿ ತಮ್ಮ ಕನಸನ್ನು ಬಿಟ್ಟುಕೊಡದ ಇವರು ಅನೇಕರಿಗೆ ಮಾದರಿಯಾಗಿದ್ದಾರೆ. ಕನಸು ನನಸಾಗುವ ಹಾದಿಯಲ್ಲಿ ಕಷ್ಟಗಳು ಇರುತ್ತವೆ. ಆದರೆ ಅದನ್ನು ಮೆಟ್ಟಿ ನಿಂತರೆ ಯಾವುದು ಕೂಡ ಕಷ್ಟವಲ್ಲ ಎನ್ನುತ್ತಾರೆ ಲತೀಶ್.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅನೇಕ ವಿದ್ಯಾರ್ಥಿಗಳು ತಮ್ಮದೇ ಆದ ಅನೇಕ ಸ್ಫೂರ್ತಿದಾಯಕ ಕಥೆಗಳನ್ನು ಹೊಂದಿದ್ದಾರೆ. ಇದರಲ್ಲಿ ಕೇರಳದ ಲತೀಶ್ ಅನ್ಸಾರಿ ಕೂಡ ಒಬ್ಬರು. ಆಮ್ಲಜನಕ ಸಿಲಿಂಡರ್‌ನೊಂದಿಗೆ ಬಂದು ಪರೀಕ್ಷೆ ಹಾಲ್ ನಲ್ಲಿ ಕುಳಿತು ಇವರು ಯುಪಿಎಸ್ ಸಿ ಪರೀಕ್ಷೆ ಬರೆದಿದ್ದಾರೆ. ಇದರ ಹಿಂದೆ ಅತ್ಯಂತ ದುಃಖದಾಯಕವಾದ ಕಥೆ ಇದೆ.
ದೇಹದ ಬೆಳವಣಿಗೆ ನಿಲ್ಲುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಇವರು, ಜನಿಸುವಾಗಲೇ ಅಪರೂಪದ ಮೂಳೆ ಕಾಯಿಲೆ ಮತ್ತು ಶ್ವಾಸಕೋಶದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಆದರೂ ಐಎಎಸ್ ಅಧಿಕಾರಿಯಾಗುವ ಕನಸು ಕಂಡರು ಮತ್ತು ಆ ಕನಸನ್ನು ನನಸಾಗಿಸುವ ಹಾದಿಯಲ್ಲಿ ಸಾಗುತ್ತಿದ್ದಾರೆ.
ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗಳನ್ನು ತಂದೆಯೇ ಸಾಕಿದ್ದಾರೆ. ಅವಳನ್ನು ಶಾಲೆ ಮತ್ತು ಕಾಲೇಜಿಗೆ ಕರೆದುಕೊಂಡು ಹೋಗಿ ಬರುತ್ತಾರೆ. 2019ರಲ್ಲಿ ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯಲು ಹೋದ ಲತೀಶ್ ತನ್ನ ಕುಟುಂಬದೊಂದಿಗೆ ಆಮ್ಲಜನಕ ಸಿಲಿಂಡರ್ ಕೂಡ ತೆಗೆದುಕೊಂಡು ಹೋಗಿದ್ದರು. ಪಕ್ಕದಲ್ಲೇ ಆಮ್ಲಜನಕ ಸಿಲಿಂಡರ್ ಇಟ್ಟುಕೊಂಡು ಪರೀಕ್ಷೆ ಬರೆದರು.
