ಉದಯವಾಹಿನಿ, ನವದೆಹಲಿ: ಉಡುಪಿಯ ಪಾದೂರಿನಲ್ಲಿ ಮೇಘಾ ಎಂಜಿನಿಯರಿಂಗ್ ಕಂಪನಿ ಭೂಗತ ತೈಲ ಸಂಗ್ರಹಣ ಘಟಕವನ್ನು ನಿರ್ಮಿಸಲಿದೆ. ಮೇಘಾ ಎಂಜಿನಿಯರಿಂಗ್ ಇನ್ಫಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ ಬಿಡ್ ಗೆದ್ದುಕೊಂಡಿದೆ. ISPRL ಬಿಡ್ ಅನ್ನು ಖಾಸಗಿ ಕಂಪನಿ ಮೊದಲ ಬಾರಿಗೆ ಗೆದ್ದುಕೊಂಡಿದ್ದು ಸುಮಾರು 5,700 ಕೋಟಿ ರೂ ವೆಚ್ಚದಲ್ಲಿ 2.5 ದಶಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸಂಗ್ರಹಣ ಘಟಕ ನಿರ್ಮಾಣವಾಗಲಿದೆ.
ಸಂಗ್ರಹಣಾ ಸೌಲಭ್ಯವನ್ನು ನಿರ್ಮಿಸಲು ಪಾದೂರಿನಲ್ಲಿ 214 ಎಕರೆ ಭೂಮಿಯನ್ನು ಐಎಸ್‌ಪಿಆರ್‌ಎಲ್ ಮೇಘಾ ಎಂಜಿನಿಯರಿಂಗ್ ಕಂಪನಿಗೆ ಉಚಿತವಾಗಿ ಹಸ್ತಾಂತರಿಸಲಿದೆ.
ಪಾದೂರಿನಲ್ಲಿ ಈಗಾಗಲೇ ತೈಲ ಸಂಗ್ರಹಣ ಘಟಕವನ್ನು ISPRL ಸ್ಥಾಪನೆ ಮಾಡಿದೆ. ಎರಡನೇ ಹಂತದ ಘಟಕ ಸ್ಥಾಪನೆ ಮಾಡುವ ಸಂಬಂಧ ದೇಶೀಯ ಮತ್ತು ಜಾಗತಿಕ ಕಂಪನಿಗಳಿಂದ ISPRL ಬಿಡ್ ಆಹ್ವಾನಿಸಿತ್ತು. ಆದರೆ ಜಾಗತಿಕ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಿರಲಿಲ್ಲ ಎಂದು ವರದಿಯಾಗಿದೆ.
ಮೇಘಾ ಕಂಪನಿಯು ಸರ್ಕಾರ ಅಥವಾ ತೈಲ ಕಂಪನಿಗಳಿಗೆ ಶೇಖರಣಾ ಸ್ಥಳವನ್ನು ಗುತ್ತಿಗೆ ನೀಡುವ ಮೂಲಕ ಆದಾಯ ಸಂಗ್ರಹಿಸಬಹುದಾಗಿದೆ. ಆದರೆ ತುರ್ತು ಸಂದರ್ಭಗಳಲ್ಲಿ ಸಂಗ್ರಹಿಸಿದ ತೈಲದ ಮೇಲೆ ಸರ್ಕಾರವು ಮೊದಲ ಹಕ್ಕನ್ನು ಹೊಂದಿರಲಿದೆ. ಈ ಗುತ್ತಿಗೆಯ ಪ್ರಕಾರ ಮೇಘಾ ಎಂಜಿನಿಯರಿಂಗ್ ಕಂಪನಿ 5 ವರ್ಷದ ಒಳಗಡೆ ಘಟಕ ನಿರ್ಮಿಸಬೇಕು ಮತ್ತು 60 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗುತ್ತದೆ.
