ಉದಯವಾಹಿನಿ, ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ದಿನಕ್ಕೊಂದು ತಿರುವು ಲಭಿಸುತ್ತಿದ್ದು, ವಿಶೇಷ ತನಿಖಾ ತಂಡ ಇದೀಗ ಬಂಗ್ಲೆಗುಡ್ಡೆಯಲ್ಲಿ ಶೋಧ ಕಾರ್ಯ ನಡೆಸಿದೆ. ಸೌಜನ್ಯಾ ಮಾವ ವಿಠ್ಠಲ್ ಗೌಡ ಅವರ ಹೇಳಿಕೆ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು 13 ಎಕ್ರೆ ವ್ಯಾಪ್ತಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ತನಿಖೆ ನಡೆಸಿದ್ದಾರೆ. ಈ ವೇಳೆ ಕೆಲವು ಮಾನವ ಶರೀರದ ಅವಶೇಷ, ವಿಷದ ಬಾಟಲ್, ಹಗ್ಗದ ತುಂಡು ಇತ್ಯಾದಿ ಪತ್ತೆಯಾಗಿದೆ. ಇದೀಗ ವಶಪಡಿಸಿಕೊಳ್ಳಲಾದ ಮಾನವ ಅವಶೇಷದ ಹಿನ್ನೆಲೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ ಎಸ್‌ಐಟಿ ಮೂಲಗಳು, ಬಂಗ್ಲೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಮಹಜರು ಸಮಯದಲ್ಲಿ ಪತ್ತೆಯಾಗಿದ್ದ ತಲೆಬುರುಡೆಗಳು ಪುರುಷರದ್ದಾಗಿದ್ದು, ಅವು ಇತ್ತೀಚಿನವುಗಳಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿವೆ.
ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿರುವ 5 ತಲೆಬುರುಡೆಗಳು ಮತ್ತು ಇತರ ಅಸ್ಥಿಪಂಜರದ ಅವಶೇಷಗಳು ಇತ್ತೀಚಿನವುಗಳಾಗಿದ್ದು, ಅವು ಪುರುಷರದ್ದಾಗಿರುವ ಸಾಧ್ಯತೆ ಇದೆ. ಪ್ರಾಥಮಿಕವಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ವಿಧಿವಿಜ್ಞಾನ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರ ಬೀಳಬೇಕಿದೆ. ಬಂಗ್ಲೆಗುಡ್ಡದೊಳಗಿನ ಅರಣ್ಯದಲ್ಲಿ ನಮ್ಮ ತಂಡಗಳು ಶೋಧ ಮುಗಿಸಿವೆ.
