ಉದಯವಾಹಿನಿ, ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಾತಿಗಣತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲೇ ಜಟಾಪಟಿ ನಡೆದಿದೆ. ಇಂದು ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಏರು ಧ್ವನಿಯಲ್ಲಿ ಕೆಲ ಸಚಿವರಿಂದ ಆಕ್ಷೇಪ ವ್ಯಕ್ತಪಡಿಸಿದ ವಿಚಾರ ಪಬ್ಲಿಕ್ ಟಿವಿಗೆ ಮೂಲಗಳಿಂದ ತಿಳಿದು ಬಂದಿದೆ.
331 ಹೊಸದಾಗಿ ಜಾತಿಗಳ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸಚಿವರು, ಜಾತಿಗಣತಿಯಿಂದ ಸರ್ಕಾರಕ್ಕೆ ಯಾವುದೇ ಹಾನಿಯಾಗಬಾರದು. ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲವನ್ನು ಸರಿಪಡಿಸದ ಹೊರತು ಜಾತಿಗಣತಿ ಬೇಡ ಎಂದಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಂತಾ ಜನರಿಗೆ ಮನವರಿಕೆ ಮಾಡಿ ಕೊಡಲು ಸಾಧ್ಯವಿದ್ಯಾ ಎಂದು ಪ್ರಶ್ನಿಸಿದ್ದಾರೆ. ಜಾತಿಗಣತಿ ಮುಂದೂಡುವಂತೆ ಡಿಕೆಶಿ ಸೇರಿದಂತೆ 20ಕ್ಕೂ ಹೆಚ್ಚು ಸಚಿವರು ಹೇಳಿದ್ದಾರೆ. 5ಕ್ಕೂ ಹೆಚ್ಚು ಸಚಿವರು ಗಣತಿ ಪರ ಇದ್ದರೆ ಉಳಿದ ಸಚಿವರು ತಟಸ್ಥರಾಗಿದ್ದರು.
ಎಲ್ಲವನ್ನೂ ಕೇಳಿಸಿಕೊಂಡ ಸಿಎಂ, ಜಾತಿಗಣತಿ ಮಾಡಲಿ, ಮಾಡದೇ ಇರಲಿ ಪರ ವಿರೋಧ ಅಭಿಪ್ರಾಯ ಬರುತ್ತದೆ. ಜಾತಿ ಗಣತಿ ನಡೆದ್ರೆ ಮೇಲ್ವರ್ಗದ ವಿರೋಧಿ ಎನ್ನುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯ ಕೊನೆಯಲ್ಲಿ ಜಾತಿಗಣತಿಯ ಬಗ್ಗೆ ಸಭೆಯಲ್ಲಿ ಮಾತನಾಡಿದ ಸಚಿವರುಗಳಿಗೆ ನೀವೇ ಒಂದು ವಿಶೇಷ ಸಭೆ ನಡೆಸಿ ಎಂದು ಸೂಚಿಸಿದರು.
ಸಚಿವರಾದ ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಹೆಚ್. ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಬೈರತಿ ಸುರೇಶ್, ಸಂತೋಷ್ ಲಾಡ್ ನೇತೃತ್ವದಲ್ಲಿ ಇಂದು ಸಂಜೆ ವಿಶೇಷ ಸಭೆ ನಡೆಯಲಿದೆ. ಈ ಸಚಿವರ ವಿಶೇಷ ಸಭೆ ವರದಿ ಬಳಿಕ ಸಿಎಂ ಸಿದ್ದರಾಮಯ್ಯ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
