ಉದಯವಾಹಿನಿ, ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಗುಡ್ಡದಲ್ಲಿ ಜಾನುವಾರುಗಳ ರಾಶಿ ರಾಶಿ ಮೂಳೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಮಗ್ಗಂ ಕಾಲೋನಿ ನಿವಾಸಿ ಮೊಹಮ್ಮದ್ ಸಮಾನ್ ಹಾಗೂ ಚೌಥನಿ ನಿವಾಸಿ ಮೊಹಮ್ಮದ್ ರಾಹೀನ್ ಬಂಧಿತರು. ಇವರು ವಿವಿಧ ಕಡೆಗಳಿಂದ ಕದ್ದ ಗೋವುಗಳನ್ನು ಭಟ್ಕಳಕ್ಕೆ ತಂದು ಮಾಂಸಕ್ಕಾಗಿ ಕಡಿದ ನಂತರ ಉಳಿದ ಮೂಳೆಗಳನ್ನು ಅರಣ್ಯದಲ್ಲಿ ಹಾಕಿ ಪರಾರಿಯಾಗುತ್ತಿದ್ದರು ಎನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಭಟ್ಕಳ ನಗರದ ಮುಗ್ಗುಂ ಕಾಲೋನಿಯಲ್ಲಿನ ಗುಡ್ಡದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಡಿದು, ಚರ್ಮ-ಎಲುಬು ಸೇರಿದಂತೆ ಮೂಳೆಗಳನ್ನು ರಾಶಿ ಹಾಕಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಸೆಪ್ಟೆಂಬರ್ 11ರಂದು ಉಪವಲಯ ಅರಣ್ಯಾಧಿಕಾರಿ ಮಾರುತಿ ಸೊರಗಾಂವಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊ ಹಳೆಯದು ಎನ್ನುವ ವಾದ ಆಗ ಕೇಳಿ ಬಂದಿತ್ತು. ಇದೀಗ ಈ ವಾದ ಸುಳ್ಳು ಎನ್ನುವುದು ಸಾಬೀತಾಗಿದೆ.
