ಉದಯವಾಹಿನಿ, ನೆಲಮಂಗಲ: ದಿ.ಹಿರಿಯ ನಟಿ, ತಾಯಿ ಲೀಲಾವತಿ ಅವರ ಸ್ಮರಣಾರ್ಥ ಮಠದ ಮಕ್ಕಳ ಅನ್ನ ದಾಸೋಹ ಸಂಗ್ರಹ ಸೇವೆಗೆ ನೆರವಾಗುವ ನಿಟ್ಟಿನಲ್ಲಿ ನಟ ವಿನೋದ್ ರಾಜ್ ಅವರು ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಬಾಗಲಕೋಟೆಯ ಮಹಾಂತ ಮಂದಾರ ಮಠ ಬನಹಟ್ಟಿ ಪೂಜ್ಯ ಶ್ರೀ ಮಹಾಂತ ದೇವರು ಸ್ವಾಮೀಜಿ ಅವರಿಗೆ ಮಾರುತಿ ಕಂಪನಿಯ ಕಾರನ್ನು ಹಸ್ತಾಂತರ ಮಾಡಿ ನೆರವಾಗಿದ್ದಾರೆ.ಈ ಮೊದಲು ಸ್ಥಳೀಯವಾಗಿ ಲೀಲಾವತಿ ಅವರ ಹೆಸರಿನಲ್ಲಿ ಸಾರ್ವಜನಿಕ ಆಸ್ಪತ್ರೆ, ಪಶು ಚಿಕಿತ್ಸಾಲಯ, ರಸ್ತೆ ರಿಪೇರಿ ಇನ್ನಿತರ ಕೆಲಸ ಕಾರ್ಯಗಳ ಮೂಲಕ ಸಮಾಜಕ್ಕೆ ತನ್ನದೇ ರೀತಿಯಲ್ಲಿ ಸಹಾಯ ಮಾಡುತ್ತ ಬಂದಿರುವ ವಿನೋದ್ ರಾಜ್ ಇದೀಗ ಮಕ್ಕಳ ಅನ್ನ ದಾಸೋಹ ಸಂಗ್ರಹಕ್ಕೆ ನೆರವಾಗುವ ನಿಟ್ಟಿನಲ್ಲಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೇ ವೇಳೆ ಕಾರಿಗೆ ದೃಷ್ಟಿ ತೆಗೆದು, ನಿಂಬೆ ಹಣ್ಣು ಒಡೆದು ಶ್ರೀಗಳು ಕಾರು ಚಾಲನೆ ಮಾಡಿದರು. ಈ ಮೂಲಕ ಜನರ ಮೆಚ್ಚುಗೆಗೆ ನಟ ವಿನೋದ್ ರಾಜ್ ಸಾಕ್ಷಿಯಾಗಿದ್ದಾರೆ.
