ಉದಯವಾಹಿನಿ, ಬೆಂಗಳೂರು: ಒಂದು ನಿಗದಿತ ಧರ್ಮವನ್ನು ಬೆಳೆಸುವ ಉದ್ದೇಶ ಸರ್ಕಾರಕ್ಕೆ ಇದ್ಯಾ? ಈ ಸಮೀಕ್ಷೆಯಲ್ಲಿ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್ ಸೇರಿ ಹತ್ತಾರು ಜಾತಿಗಳನ್ನು ಸೇರಿಸಲು ನಿಮಗೆ ಯಾರು ಪ್ರೇರಣೆ ಕೊಟ್ಟಿದ್ದಾರೆ. ಈ ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಅನ್ನು ಸಮೀಕ್ಷೆಯ ವೇಳೆ ಸೇರಿಸಬಾರದು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದರು. ಇದನ್ನು ಸಾಮಾಜಿಕ-ಆರ್ಥಿಕ ಸರ್ವೇ ಎಂದು ಹೇಳಿದ್ದಾರೆ. ಆದರೆ, ಇವರು ಜಾತಿಗಳಿಗೆ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್ ಹೀಗೆ ಪರಿಶಿಷ್ಟ ಜಾತಿಗಳಲ್ಲಿ ಇರುವ ಎಲ್ಲಕ್ಕೂ ಕ್ರಿಶ್ಚಿಯನ್ ಪದ ಸೇರಿಸಿದ್ದಾರೆ. ಇದರ ಹಿಂದೆ ಇವರನ್ನೆಲ್ಲ ಕ್ರಿಶ್ಚಿಯನ್ ಮಾಡುವ ಉದ್ದೇಶವೇ? ಕಾಂಗ್ರೆಸ್ ಸರ್ಕಾರದ ಈ ಸಮೀಕ್ಷೆ ಬೂಟಾಟಿಕೆ ಮತ್ತು ಪುಂಡಾಟಿಕೆಯದು ಎಂದು ಆಕ್ಷೇಪಿಸಿದರು.
