ಉದಯವಾಹಿನಿ, ನವದೆಹಲಿ: ಭಾರತೀಯ ಸಿನೆಮಾ ರಂಗದಲ್ಲಿ ಬಾಲಿವುಡ್ ಆ್ಯಕ್ಷನ್ ಸಿನಿಮಾದಲ್ಲಿ ಶೋಲೆ ಸಿನಿಮಾವು (Sholay Movie) ಈಗಲೂ ಶ್ರೇಷ್ಠ ಸಿನಿಮಾಗಳ ಸಾಲಿನಲ್ಲಿ ಒಂದು ಎಂದು ಖ್ಯಾತಿ ಪಡೆದಿದೆ. 1975ರಲ್ಲಿ ತೆರೆ ಕಂಡ ಈ ಸಿನಿಮಾವು ಬರೋಬ್ಬರಿ 5ವರ್ಷಕ್ಕೂ ಅಧಿಕ ಕಾಲ ಸಿನಿಮಾ ಮಂದಿರದಲ್ಲಿ ಪ್ರದರ್ಶನ ಕಂಡು ದೊಡ್ಡ ದಾಖಲೆಯನ್ನೇ ಮಾಡಿತು. ಈ ಸಿನಿಮಾ ಬಿಡುಗಡೆ ಯಾಗಿ 50ವರ್ಷಗಳು ಕಳೆದಿದ್ದರೂ ಕೂಡ ಆ ಸಿನಿಮಾ ಮಾಡಿದ್ದ ದಾಖಲೆಗಳನ್ನು ಇಂದಿಗೂ ಮರೆಯುವಂತಿಲ್ಲ. ಇದೀಗ ಇದೇ ಸಿನಿಮಾವನ್ನು ಹೆಚ್ಚಿನ ತಂತ್ರಜ್ಞಾನಗಳನ್ನು ಬಳಸಿ, ಅಡ್ವಾನ್ಸ್ ಟೆಕ್ನಾಲಜಿ ಬಳಸಿ HD ಕ್ವಾಲಿಟಿಯಲ್ಲಿ ಮರು ಬಿಡುಗಡೆ ಮಾಡಲು ತಯಾರಿ ನಡೆಸಲಾಗುತ್ತಿದೆ. ಸಿಡ್ನಿಯ ಭಾರತೀಯ ಚಲನಚಿತ್ರೋತ್ಸವವು ಇದೇ ಅಕ್ಟೋಬರ್‌ನಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಶೋಲೆ ಸಿನಿಮಾಕ್ಕೆ 50 ವರ್ಷ ಪೂರೈಸಿದ್ದ ಹಿನ್ನೆಲೆಯಲ್ಲಿ ಈ ಐಕಾನಿಕ್ ಸಿನಿಮಾವನ್ನು ಮರು ಬಿಡುಗಡೆ ಮಾಡಲು ಈಗಾಗಲೇ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.
ಚಲನಚಿತ್ರ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಚಲನಚಿತ್ರದಲ್ಲಿ ಒಂದಾದ ಶೋಲೆ ಸಿನಿಮಾಕ್ಕೆ ಈಗಲೂ ಅಭಿಮಾನಿ ಬಳಗವಿದ್ದು ಆ ಸಿನಿಮಾದ ಕೆಲವು ಹೆಗ್ಗುರುತನ್ನು ಜನರ ಮುಂದೆ ಪ್ರಸ್ತುತ ಪಡಿಸಲು ಮರುಬಿಡುಗಡೆಯ ಆಲೋಚನೆಯನ್ನು ಮಾಡಲಾಗಿದೆ. ಭಾರತೀಯ ಚಲನಚಿ ತ್ರೋತ್ಸವ ಮೆಲ್ಬೋರ್ನ್ (IFFM) ನ ತಂಡವು ಪ್ರಸ್ತುತಪಡಿಸುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಸಿಡ್ನಿ (IFFS) ಯನ್ನು ಆಯೋಜಿಸಿದ್ದು ಈ ಬಾರಿ ಈ ಕಾರ್ಯಕ್ರಮದಲ್ಲಿ ಶೋಲೆಯ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.
ಅಕ್ಟೋಬರ್ 9 ರಿಂದ 11 ರವರೆಗೆ ನಡೆಯುವ ಈ ಸಿನಿಮಾ ಉತ್ಸವವು ಮೂರು ದಿನಗಳ ಕಾಲ ನಡೆಯಲಿದ್ದು ಭಾರತೀಯ ಚಲನಚಿತ್ರೋದ್ಯಮದ ಅನೇಕ ಸಿನಿಮಾಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಶೋಲೆಯನ್ನು ಫಿಲ್ಮ್ ಹೆರಿಟೇಜ್ ಫೌಂಡೇಶನ್, ಸಿಪ್ಪಿ ಫಿಲ್ಮ್ಸ್ ಸಹಯೋಗ ದೊಂದಿಗೆ ಉತ್ತಮ ಗುಣಮಟ್ಟದಲ್ಲಿ ಈ ಸಿನಿಮಾವನ್ನು ಅದೇ ಕಾರ್ಯಕ್ರಮದಂದು ರೀ ರಿಲೀಸ್ ಮಾಡಲಾಗುತ್ತದೆ. ಈ ಸಿನಿಮಾ ಬಹಳ ಹಿಂದಿನದ್ದಾಗಿದ್ದು ಮೂಲ ಕ್ಯಾಮೆರಾ ವರ್ಕ್ ಮತ್ತು ಅಳಿಸಲಾದ ದೃಶ್ಯಗಳನ್ನು ಮರುಪಡೆಯಲು ಕೂಡ ಹೊಸ ತಂತ್ರಜ್ಞಾನ ಬಳಸಲಾಗುತ್ತಿದೆ.
