ಉದಯವಾಹಿನಿ, ಚಿಕ್ಕಮಗಳೂರು: ವರ್ಷದ ಎಂಟೊಂಬತ್ತು ತಿಂಗಳು ಮಳೆ, ವರ್ಷಪೂರ್ತಿ ತಣ್ಣನೆಯ ಗಾಳಿ, ಚಳಿ ಹೀಗೆ ಅರ್ಧ ವರ್ಷ ಮಂಜಿನಿಂದಲೇ ಮುಳುಗೋ ಕಾಡಂಚಿನ ಗ್ರಾಮ ಕೊಟ್ಟಿಗೆಹಾರ. ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟಿಯಂತಹಾ ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ಸಿಗುವ ಈ ಪುಟ್ಟ ಕೊಟ್ಟಿಗೆಹಾರ ಪ್ರವಾಸಿಗರ ಹಾಟ್‍ಸ್ಪಾಟ್ ಕೂಡ ಹೌದು. ಈ ಮಾರ್ಗದಲ್ಲಿ ಧರ್ಮಸ್ಥಳ, ಉಡುಪಿ ಹಾಗೂ ಮಂಗಳೂರಿಗೆ ಸಂಚರಿಸೋ ವಾಹನಗಳು ಇಲ್ಲೊಂದು ಸ್ಟಾಪ್ ಕೊಡದೇ ಮುಂದೆ ಹೋಗಲ್ಲ. ಈ ಮಾರ್ಗದಲ್ಲಿ ಹೋಗುವಾಗ ಹಲವು ದಶಕಗಳಿಂದಲೂ ಟೀ, ಕಾಫಿ ಲೆಮನ್ ಟೀ ಸವಿಯುತ್ತಿದ್ದ ಪ್ರವಾಸಿಗರು ಕೂಡ ಈಗ ಮಲೆನಾಡಿಗರ ಜೊತೆ ಬರಗಾಪಿಗೆ ಫಿದಾ ಆಗಿದ್ದಾರೆ.
ಚಾರ್ಮಾಡಿ ಘಾಟಿಯ ತಪ್ಪಲು ಅಂದ್ರೆ ಕೇಳೋದೇ ಬೇಡ. ಗಾಳಿ-ಮಳೆ-ಚಳಿಗೆ ಬರವಿಲ್ಲ. ಒಂದಕ್ಕೊಂದು ಅಂಟಿಕೊಂಡ ಚೈನ್ ಲಿಂಕ್‍ನಂತೆ ವರ್ಷಪೂರ್ತಿ ಮಲೆನಾಡಿಗರ ಜೊತೆ ಪ್ರವಾಸಿಗರನ್ನು ಗಡಗಡ ನಡುಗಿಸುತ್ತೆ. ಅದರಲ್ಲೂ ಮೇ-ಜೂನ್‍ನಿಂದ ಅಕ್ಟೋಬರ್-ನವೆಂಬರ್‌ ವರೆಗೂ ಇಲ್ಲಿನ ಗಾಳಿ-ಚಳಿ-ಮಳೆಯ ಅಬ್ಬರ ಹೇಳೋದು ಅಸಾಧ್ಯ. ಆ ಚಳಿ-ಗಾಳಿ-ಮಳೆಯನ್ನ ಪ್ರವಾಸಿಗರಿಗಿಂತ ಮಲೆನಾಡಿಗರೇ ಹೆಚ್ಚು ಪ್ರೀತಿಸ್ತಾರೆ! ಅದನ್ನು ಪ್ರಕೃತಿಯ ಜೊತೆ ಸೇರಿ ಎಂಜಾಯ್‌ ಮಾಡ್ತಾರೆ. ಅಂತಹಾ ಕಾಡಂಚಿನ ಗ್ರಾಮದಲ್ಲೀಗ ಮಲೆನಾಡಿಗರು ಹಾಲಿಲ್ಲದ ಬರಗಾಪಿಗೆ ಮನಸೋತಿದ್ದಾರೆ.

Leave a Reply

Your email address will not be published. Required fields are marked *

error: Content is protected !!