ಉದಯವಾಹಿನಿ, ದುಬೈ: ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಸೂಪರ್ ಓವರ್ ಥ್ರಿಲ್ಲರ್‌ನಲ್ಲಿ ಶ್ರೀಲಂಕಾ ಎದುರು ಭಾರತ ತಂಡ (India) ರೋಚಕ ಗೆಲುವು ಪಡೆದಿತ್ತು. ಈ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ಇತ್ತೀಚೆಗೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದ ಶ್ರೀಲಂಕಾ ಆಟಗಾರ ದುನಿತ್ ವೆಲ್ಲಾಳಗೆ (Dunit Wellalage) ಅವರನ್ನು ಸೂರ್ಯಕುಮಾರ್ ಯಾದವ್ ಸಾಂತ್ವಾನ ಹೇಳಿದರು. ಆ ಮೂಲಕ ಹೃದಯವಂತಿಕೆಯನ್ನು ಪ್ರದರ್ಶಿಸಿದರು. ಈ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವ ಮೂಲಕ ಸೆಪ್ಟಂಬರ್ 28 ರಂದು ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಪಾಕಿಸ್ತಾನವನ್ನು ಎದುರಿಸಲಿದೆ.
ದುನಿತ್ ವೆಲ್ಲಾಳಗೆ ಅವರು ಏಷ್ಯಾಕಪ್ ಟೂರ್ನಿಯಲ್ಲಿ ಆಡುವ ವೇಳೆ ತಮ್ಮ ತಂದೆ ಸುರಂಗ ವೆಲ್ಲಾಳಗೆ ಅವರನ್ನು ಕಳೆದುಕೊಂಡಿದ್ದರು. ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಇದರ ಹೊರತಾಗಿಯೂ ಶ್ರೀಲಂಕಾ ತಂಡದಲ್ಲಿ ಮುಂದುವರಿದು ಸೂಪರ್-4ರ ಪಂದ್ಯಗಳನ್ನು ಆಡಲು ಬಯಸಿದ್ದರು. ಆ ಮೂಲಕ ಕುಟುಂಬದ ಕಠಿಣ ಸಂದರ್ಭದಲ್ಲಿಯೂ ರಾಷ್ಟ್ರೀಯ ತಂಡದ ಪರ ಆಡುವ ಬದ್ದತೆಯನ್ನು ಅವರು ಪ್ರದರ್ಶಿಸಿದ್ದರು. ಅಂದ ಹಾಗೆ ಈ ಪಂದ್ಯದಲ್ಲಿ ನಡೆದಿದ್ದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ತಂಡವನ್ನು ಭಾರತ ಮಣಿಸಿತ್ತು. ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೂರ್ಯಕುಮಾರ್ ಯಾದವ್ ಅವರು ನೇರವಾಗಿ ದುನಿತ್ ವೆಲ್ಲಾಳಗೆ ಅವರನ್ನು ಮಾತನಾಡಿದರು. ಅಲ್ಲದೆ ತಮ್ಮ ಕೈಯನ್ನು ಅವರ ಹೆಗಲ ಮೇಲೆ ಹಾಕಿ ತಮ್ಮ ತಂದೆಯನ್ನು ಕಲೆದುಕೊಂಡ ವೆಲ್ಲಾಳಗೆ ಅವರಿಗೆ ಸಾಂತ್ವಾನ ಹೇಳಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು. ಸೂರ್ಯಕುಮಾರ್ ಯಾದವ್ ಅವರ ನಡೆಯನ್ನು ಎರಡೂ ರಾಷ್ಟ್ರಗಳ ಕ್ರಿಕೆಟ್ ಅಭಿಮಾನಿಗಳು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
