
ಉದಯವಾಹಿನಿ, ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋಟಾ ನೋಟಿನ ಗ್ಯಾಂಗ್ ಆಕ್ಟೀವ್ ಆಗಿದೆ. 10 ಲಕ್ಷ ರೂ. ಒರಿಜಿನಲ್ ನೋಟ್ ಕೊಟ್ಟರೆ 30 ಲಕ್ಷ ರೂ. ಕೋಟಾ ನೋಟಿನ ಆಫರ್ ನೀಡಿ ಜನರಿಗೆ ವಂಚಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜಯನಗರದ 4ನೇ ಬ್ಲಾಕ್‌ನಲ್ಲಿ ಹಣದ ಸಮೇತ ನಿಂತಿದ್ದ ತಮಿಳುನಾಡಿನ ತಿರುನೆಲ್ವೇಳಿಯ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳು 10 ಲಕ್ಷ ಅಸಲಿ ನೋಟಿಗೆ ಒರಿಜಿನಲ್ ರೀತಿಯೇ ಕಾಣುವ 3 ಪಟ್ಟು ಹಣ ನೀಡುತ್ತೇವೆ ಅಂತಾ ಜನರನ್ನು ನಂಬಿಸುತ್ತಿದ್ರು. ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದ ಈ ಗ್ಯಾಂಗ್ ಇತ್ತೀಚಿಗೆ ಬೆಂಗಳೂರಲ್ಲಿ ಆ್ಯಕ್ಟೀವ್ ಆಗಿತ್ತು. ಜಯನಗರ 4th ಬ್ಲಾಕ್‌ನಲ್ಲಿ ಹಣದ ಸಮೇತ ನಿಂತಿದ್ದ ಗ್ಯಾಂಗ್ ಬಗ್ಗೆ ಖಚಿತ ಮಾಹಿತಿ ಪಡೆದ ಜಯನಗರ ಪೊಲೀಸ್ರು ರೆಡ್ ಹ್ಯಾಂಡ್ ಆಗಿ ಮೂವರು ಆರೋಪಿಗಳನ್ನು ಲಾಕ್ ಮಾಡಿದ್ದಾರೆ.
ಪೊಲೀಸರ ದಾಳಿ ವೇಳೆ ವಂಚಕರು ನೋಟಿನ ಬಂಡಲ್ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ಒರಿಜಿನಲ್ ನೋಟುಗಳನ್ನಿಟ್ಟು ಮಧ್ಯಭಾಗದಲ್ಲಿ ಬಿಳಿ ಹಾಳೆ ಜೋಡಿಸಿ ವಂಚನೆ ಮಾಡ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಸದ್ಯ ಮೂವರನ್ನ ಬಂಧಿಸಿ ಇನ್ನುಳಿದ ಆರೋಪಿಗಳಿಗಾಗಿ ಜಯನಗರ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಖತರ್ನಾಕ್ ಗ್ಯಾಂಗ್ ಹಲವರಿಗೆ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬಂಧಿತರಿಂದ 15 ಸಾವಿರ ರೂ ಅಸಲಿ ನೋಟ್ ಸಮೇತ ಕಾರು, ಸೂಟ್ ಕೇಸ್ ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಕಡೇ ಅಸಲಿ ನೋಟು ಕೊಟ್ಟು ನಕಲಿ ನೋಟು ಪಡೆಯಲು ಮುಂದಾದವರ ಮೇಲೂ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
