ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಮತ್ತು ಕ್ರಾಂತಿಯ ಚರ್ಚೆ ಮಧ್ಯೆ ಔತಣ ಕೂಟಗಳೂ ಸದ್ದು ಮಾಡುತ್ತಿವೆ. ಸಿಎಂ ಸಿದ್ದರಾಮಯ್ಯ ಮತ್ತು ಆಪ್ತರಿಗೆ ಮಾಜಿ ಸಚಿವ ಕೆ ಎನ್ ರಾಜಣ್ಣ ಕರೆದಿದ್ದ ತುಮಕೂರು ಔತಣ ಕೂಟ ಮಿಸ್ ಆಗಿತ್ತು. ಈಗ ರಾಜಣ್ಣ ಮನೆಯಿಂದ ಸಂಸದ ರಾಜಶೇಖರ್ ಹಿಟ್ನಾಳ್ ಅವರ ದೆಹಲಿ ನಿವಾಸಕ್ಕೆ ಶಿಫ್ಟ್ ಆಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಬಿಹಾರ ಫಲಿತಾಂಶ ಮುಗಿದ ಬೆನ್ನಲ್ಲೇ ದೆಹಲಿ ಅಂಗಳದಲ್ಲೇ ರಾಜಕೀಯ ದಾಳಗಳನ್ನು ಉರುಳಿಸುವ ಸುಳಿವು ಕೊಟ್ಟಿದ್ದಾರೆ.
ರಾಜ್ಯ ಕಾಗ್ರೆಸ್‌ನಲ್ಲಿ ಪವರ್ ಶೇರ್ ಮತ್ತು ಪುನಾರಚನೆ ಜಪ ಜೋರಾಗಿದೆ. ಸಿಎಂ ಮತ್ತು ಡಿಸಿಎಂ ತಮ್ಮ ಅಂತಿಮ ಹಂತದ ದಾಳಗಳನ್ನು ದೆಹಲಿಯಲ್ಲೇ (Delhi) ಪ್ರಯೋಗಿಸಲು ವೇದಿಕೆಯೂ ಸಿದ್ಧಗೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯನವರು ಬಿಹಾರ ಫಲಿತಾಂಶ ಬಂದ ಮಾರನೇ ದಿನ ಅಂದ್ರೆ ನವೆಂಬರ್ 15 ರಂದೇ ದೆಹಲಿ ಫ್ಲೈಟ್ ಹತ್ತುತ್ತಿದ್ದಾರೆ. ಸಿಎಂ ಮತ್ತು ಆಪ್ತರಿಗೆ ದೆಹಲಿಯಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ಹೆಣೆಯಲು ಸಂಸದ ರಾಜಶೇಖರ್ ಹಿಟ್ನಾಳ್ (Rajashekar Hitnal) ಭರ್ಜರಿ ವೇದಿಕೆ ಒದಗಿಸಿ ಕೊಡಲಿದ್ದಾರೆ. ಸಂಸದ ರಾಜಶೇಖರ್ ಹಿಟ್ನಾಳ್ ಅವರು ದೆಹಲಿಗೆ ಬರುತ್ತಿರುವ ಸಿಎಂ ಮತ್ತು ಆಪ್ತರಿಗೆ ತಮ್ಮ ನಿವಾಸದಲ್ಲೇ ಡಿನ್ನರ್ ಕೂಟ ಆಯೋಜಿಸಲು ಮುಂದಾಗಿದ್ದಾರೆ.
