ಉದಯವಾಹಿನಿ, ಬೆಂಗಳೂರು: ದೇಶಾದ್ಯಂತ ಸದ್ದು ಮಾಡುತ್ತಿರುವ ಪರಪ್ಪನ ಅಗ್ರಹಾರ ರಾಜಾತಿಥ್ಯದ ವಿಡಿಯೋವನ್ನು ಮೊದಲು ಸೆರೆ ಹಿಡಿದ ವ್ಯಕ್ತಿ ಯಾರು ಎನ್ನುವ ಬಗ್ಗೆ ಪೊಲೀಸರು ಈಗ ತಲೆಕೆಡಿಸಿಕೊಂಡಿದ್ದಾರೆ.
ಹೌದು. ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪವನ್ ಎಂಬಾತ ಮೊದಲು ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಈತ ವಿಡಿಯೋವನ್ನು ವಿಲ್ಸನ್ ಗಾರ್ಡನ್ ನಾಗನ ಕಡೆಯವರಿಗೆ ಕಳುಹಿಸಿದ್ದಾನೆ. ನಾಗನ ಕಡೆಯವರು ನಟ ಧನ್ವೀರ್‌ಗೆ ಕಳುಹಿಸಿದ್ದಾರೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೇ ಜೈಲು ಡಿಐಜಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಅಧಿಕಾರಿ ಬಳಿಯು ವಿಡಿಯೋ ಹೋಗಿದೆ. ಆ ಅಧಿಕಾರಿಯ ಕೈ ಸೇರಿದ ಬಳಿಕ ವಿಡಿಯೋ ವೈರಲ್ ಆಗಿದೆ ಎನ್ನಲಾಗುತ್ತಿದೆ. ಪ್ರಾಥಮಿಕ ವಿಚಾರ ಲಭ್ಯವಾದ ಬೆನ್ನಲ್ಲೇ ಸಿಸಿಬಿ (CCB) ಪೊಲೀಸರು ಧನ್ವೀರ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ವಿಲ್ಸನ್ ಗಾರ್ಡನ್ ನಾಗ ಹಲವು ಜೈಲು ಶಿಕ್ಷೆ ಅನುಭವಿಸಿದ್ದರೆ, ಇನ್ನೂ ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ವಿಲ್ಸನ್ ಗಾರ್ಡನ್ ನಾಗನ ಪ್ರಸ್ತುತ ಐದು ಕೊಲೆ ಯತ್ನದ ಆರೋಪ ಎದುರಿಸುತ್ತಿದ್ದು, ಅದು ವಿಚಾರಣೆ ಹಂತದಲ್ಲಿದೆ. ಕಳೆದ 20 ವರ್ಷಗಳಲ್ಲಿ ಆತನ ವಿರುದ್ಧ ಏಳು ಕೊಲೆ ಸೇರಿದಂತೆ 23 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು.
