ಉದಯವಾಹಿನಿ, ಬೆಂಗಳೂರು: ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ನಡೆಸಿದ ಕುಡಿತ ಮೋಜು ಮಸ್ತಿಯ ಫೋಟೋ ಹಾಗೂ ವಿಡಿಯೋ ದೃಶ್ಯಗಳು ವೈರಲ್ ( ಆಗಿದ್ದ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸ್ ಇಲಾಖೆ ಚುರುಕಾಗಿತ್ತು. ಇದಲ್ಲದೇ ಶಂಕಿತ ಐಸಿಸ್ ಉಗ್ರನಿಗೆ ಮೊಬೈಲ್ ನೀಡಿದಂತಹ ವೀಡಿಯೋ ಕೂಡ ಬಹಿರಂಗವಾದ ಹಿನ್ನೆಲೆಯಲ್ಲಿ ಸರಕಾರ ಅಲರ್ಟ್ ಆಗಿತ್ತು. ಈ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ನಿರ್ವಹಣೆಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರನ್ನಾಗಿ ಅಂಶು ಕುಮಾರ್ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರವು ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದು, ಕಾರಾಗೃಹಗಳ ಪೊಲೀಸ್ ಅಧೀಕ್ಷಕರಾದ ಅಂಶು ಕುಮಾರ್ (ಕೆಎನ್: 2018) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ. ಕೆ. ಸುರೇಶ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದಿದೆ.
2016 ರ ಐಪಿಎಸ್ (ವೇತನ) ನಿಯಮಗಳ 12 ನೇ ನಿಯಮದ ಅಡಿಯಲ್ಲಿ, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಮುಖ್ಯ ಕಾರಾಗೃಹ ಸೂಪರಿಂಟೆಂಡೆಂಟ್ ಹುದ್ದೆಯನ್ನು ಮಂಡ್ಯದ ಪೊಲೀಸ್ ಸೂಪರಿಂಟೆಂಡೆಂಟ್ ಹುದ್ದೆಗೆ ಸಮಾನ ಸ್ಥಾನಮಾನ ಮತ್ತು ಜವಾಬ್ದಾರಿಗಳಲ್ಲಿ ಸಮಾನವೆಂದು ಘೋಷಿಸಲಾಗಿದೆ. ಇದನ್ನು ಸದರಿ ನಿಯಮಗಳ ವೇಳಾಪಟ್ಟಿ II ರಲ್ಲಿ ಸೇರಿಸಲಾಗಿದೆ ಎಂಬುದಾಗಿ ತಿಳಿಸಿದೆ.
