ಉದಯವಾಹಿನಿ, ಮೈಸೂರು: ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಪ್ರಾಣಿಗಳು ಅರಣ್ಯದಿಂದ ಹೊರಬರಲು ಕಾರಣಗಳನ್ನ ಕೇಳಿ, ಕೆರೆಗಳನ್ನು ತುಂಬಿಸಿ, ಗಿಡಗಳನ್ನು ತೆರವುಗೊಳಿಸಿ ಮೇವು ಬೆಳೆಸಲು ಆದೇಶಿಸಿದ್ದಾರೆ. ಜೊತೆಗೆ ಕಾಡುಪ್ರಾಣಿಗಳ ಸಂಘರ್ಷ ತಡೆಗೆ 1926 ಟೋಲ್ ಫ್ರೀ ಸಹಾಯವಾಣಿಯನ್ನೂ ಸಹ ಬಿಡುಗಡೆ ಮಾಡಲಾಗಿದೆ. ಈ ನಡುವೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ನಡೆ ಖಂಡಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷ ಮುಂದುವರಿದ ಹಿನ್ನೆಲೆ ರೊಚ್ಚಿಗೆದ್ದ ರೈತರು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನ ಮುತ್ತಿಗೆಗೆ ಯತ್ನಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ (ರೈತಪರ್ವ) ದಿಂದ ಪ್ರತಿಭಟನೆ ನಡೆಸಲಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ರೈತರನ್ನ ಅರಣ್ಯ ಭವನದ ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ. ಇದರಿಂದ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಆದಾಗ್ಯೂ ʻಕಾಡು ಪ್ರಾಣಿಗಳಿಂದ ರೈತರನ್ನು ಉಳಿಸಿʼ ಎಂದು ಘೋಷಣೆ ಕೂಗುತ್ತಾ ಪ್ರತಿಭಟಿಸಿದ ರೈತರು ರಾಜ್ಯ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
