ಉದಯವಾಹಿನಿ, ಗುವಾಹಟಿ: ನವೆಂಬರ್ 22 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಶುಭಮನ್ ಗಿಲ್ ತಂಡದ ಉಳಿದವರೊಂದಿಗೆ ಗುವಾಹಟಿಗೆ ಪ್ರಯಾಣಿಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ದೃಢಪಡಿಸಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಗಿಲ್ ಕುತ್ತಿಗೆಗೆ ಗಾಯವಾಗಿದ್ದು, ಅವರನ್ನು ನಗರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗಿಲ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಮತ್ತು ಕೋಲ್ಕತ್ತಾದಿಂದ ಗುವಾಹಟಿಗೆ ಹಾರಲು ಅನುಮತಿ ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಆದರೆ ಗಿಲ್ ಎರಡನೇ ಪಂದ್ಯದಲ್ಲಿ ಆಡುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಬುಧವಾರ ಬೆಳಿಗ್ಗೆ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಹೊರಡುವ ವೇಳೆ ಗಿಲ್ ಕುತ್ತಿಗೆಗೆ ಕಟ್ಟುಪಟ್ಟಿ ಧರಿಸಿರುವುದು ಕಂಡುಬಂದಿತು.
“ದಕ್ಷಿಣ ಆಫ್ರಿಕಾ ವಿರುದ್ಧದ ಕೋಲ್ಕತ್ತಾ ಟೆಸ್ಟ್ ಪಂದ್ಯದ 2 ನೇ ದಿನದಂದು ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಕುತ್ತಿಗೆಗೆ ಗಾಯವಾಗಿತ್ತು, ದಿನದ ಆಟ ಮುಗಿದ ನಂತರ ಅವರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮರುದಿನವೇ ಆಸ್ಪತ್ರೆಯಿಂದ ಡಿಸಾರ್ಜ್ ಕೂಡ ಮಾಡಲಾಗಿತ್ತು. ಸದ್ಯ ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು 2 ನೇ ಟೆಸ್ಟ್‌ನಲ್ಲಿ ಅವರು ಭಾಗವಹಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಬಿಸಿಸಿಐ ತಿಳಿಸಿದೆ.
ದಕ್ಷಿಣ ಆಫ್ರಿಕಾ ತಂಡ ಸರಣಿಯ ಮೊದಲ ಪಂದ್ಯದಲ್ಲಿ 30 ರನ್‌ಗಳಿಂದ ಆಘಾತ ನೀಡಿದ ನಂತರ, ಎರಡನೇ ಟೆಸ್ಟ್‌ಗೆ ಗಿಲ್ ಫಿಟ್ ಆಗಬೇಕೆಂದು ಭಾರತ ತೀವ್ರ ಪ್ರಯತ್ನ ನಡೆಸುತ್ತಿದೆ. ಒಂದೊಮ್ಮೆ ಶುಭಮನ್ ಗಿಲ್ ಎರಡನೇ ಟೆಸ್ಟ್‌ಗೆ ಲಭ್ಯವಿಲ್ಲದಿದ್ದರೆ ಭಾರತ ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಮರುಪರಿಶೀಲಿಸಬೇಕಾಗುತ್ತದೆ. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕೂಡ ತಂಡಕ್ಕೆ ಸೇರಿಸಿಕೊಳ್ಳಲಿದೆ.
