ಉದಯವಾಹಿನಿ, ಕ್ಯಾರೆಟ್ ಚರ್ಮದ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಅಂತಾರೆ ಸೌಂದರ್ಯ ತಜ್ಞರು. ನಿಯಮಿತವಾಗಿ ಕ್ಯಾರೆಟ್ ಸೇವಿಸುವುದರಿಂದ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು. ಮುಖವನ್ನು ಕಾಂತಿಯುತವಾಗಿಸುವ ವಿವಿಧ ಫೇಸ್ ಪ್ಯಾಕ್‌ಗಳು ಮತ್ತು ಮಾಸ್ಕ್‌ಗಳನ್ನು ತಯಾರಿಸಬಹುದು.
ಮೇಕಪ್ಗೂ ಮುನ್ನ ಹೀಗೆ ಮಾಡಿ: ನಾವು ಧರಿಸುವ ಮೇಕಪ್ ಹೆಚ್ಚು ಕಾಲ ಉಳಿಯಲು ಚರ್ಮದ ತೇವಾಂಶ ಉತ್ತಮವಾಗಿರಬೇಕು. ಮೇಕಪ್ ಹಚ್ಚುವ ಮೊದಲು ಅರ್ಧ ಚಮಚ ಕ್ಯಾರೆಟ್ ರಸ ಮತ್ತು ಅರ್ಧ ಚಮಚ ಕಮಲದ ಬೇರಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ನಿಮ್ಮ ಮುಖವನ್ನು 10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡಿದ ನಂತರ ಮೇಕಪ್ ಮಾಡಿಕೊಂಡರೆ, ಇದರ ಪರಿಣಾಮ ದೀರ್ಘಕಾಲದವರೆಗೆ ಗೋಚರಿಸುತ್ತದೆ. ಪಿಗ್ಮೆಂಟೇಶನ್ ಸಮಸ್ಯೆಗೆ ಈ ಪ್ಯಾಕ್ ಬೆಸ್ಟ್: ನೀವು ಪಿಗ್ಮೆಂಟೇಶನ್ ಸಮಸ್ಯೆಯಿಂದ ಬಳಲುತ್ತಿದ್ದರೆ, ತಜ್ಞರು ಸೂಚಿಸುವಂತಹ ಈ ಫೇಸ್ ಪ್ಯಾಕ್ ಪ್ರಯತ್ನಿಸಬಹುದು. ಪ್ಯಾಕ್ ತಯಾರಿಸುವುದು ಹೇಗೆ ಎಂಬುದನ್ನು ಈಗ ತಿಳಿಯೋಣ ಬನ್ನಿ.
ಫೇಸ್ ಪ್ಯಾಕ್ಗಾಗಿ ಬೇಕಾಗುವ ಸಾಮಗ್ರಿ: ಕ್ಯಾರೆಟ್ ರಸ- 2 ಟೀಸ್ಪೂನ್ ಓಟ್ಸ್ ಪುಡಿ- 1 ಟೀಸ್ಪೂನ್ ಅರಿಶಿನ- ಅರ್ಧ ಟೀಸ್ಪೂನ್ ಸಕ್ಕರೆ- 1 ಟೀಸ್ಪೂನ್
ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?: ಮೊದಲಿಗೆ ಕ್ಯಾರೆಟ್ ಅನ್ನು ಸಣ್ಣಗೆ ಕತ್ತರಿಸಿ ರುಬ್ಬಿಕೊಳ್ಳಿ. ಅದರಿಂದ ರಸ ತಯಾರಿಸಿ. ರಸಕ್ಕೆ ಓಟ್ಸ್ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣವು ನಯವಾದ ಪೇಸ್ಟ್ ಆದ ಬಳಿಕ ಸ್ವಲ್ಪ ಅರಿಶಿನ ಹಾಗೂ ಸಕ್ಕರೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. 20 ನಿಮಿಷಗಳ ಬಳಿಕ ಮುಖವನ್ನು ನೀರಿನಿಂದ ತೊಳೆಯಿರಿ. ಅರಿಶಿನವು ಮೈಬಣ್ಣವನ್ನು ಸುಧಾರಿಸುತ್ತದೆ. ಕ್ಯಾರೆಟ್ ರಸವು ಚರ್ಮವನ್ನು ಹೊಳಪಿಗೆ ಸಹಾಯ ಮಾಡುತ್ತದೆ. ಸಕ್ಕರೆ ಮತ್ತು ಓಟ್ಸ್ ಪುಡಿ ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ.
