ಉದಯವಾಹಿನಿ, ಗದಗ: ಚೆನ್ನಾಗಿ ಓದು, ಕಾಲೇಜು ಬಿಡಬೇಡ, ಎಲ್ಲಂದೆರಲ್ಲಿ ಟೂರ್ ಹೋಗಬೇಡ ಎಂದು ಮನೆಯಲ್ಲಿ ಬುದ್ದಿಮಾತು ಹೇಳಿದ್ದಕ್ಕೆ ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ನಗರದ ಭೀಷ್ಮ ಕೆರೆಯಲ್ಲಿ ನಡೆದಿದೆ. ನಗರದ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆಯಲ್ಲಿ ಮುಳುಗಿ ಚಂದ್ರಿಕಾ (21) ನಡುವಿನಮನಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಂದ್ರಿಕಾ ಗದಗ ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೈನಲ್ ಇಯರ್ ವ್ಯಾಸಂಗ ಮಾಡುತ್ತಿದ್ದಳು.
ಚಂದ್ರಿಕಾ ಮೂಲತಃ ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದ ನಿವಾಸಿ. ನಗರದ ಸಂಭಾಪೂರ ರಸ್ತೆಯ ಲಕ್ಷ್ಮೀ ನಗರದಲ್ಲಿ ಬಾಡಿಗೆ ಮನೆಯಲ್ಲಿ ಗೆಳತಿಯರೊಂದಿಗೆ ವಾಸವಿದ್ದಳು. ಫ್ರೆಂಡ್ಸ್ ಜೊತೆ ಟೂರ್ ಹೋಗಿದ್ದಳು. ಈ ವಿಷಯ ಮನೆಯವರಿಗೆ ಗೊತ್ತಾಗಿದೆ. ಓದುವುದು, ಕಾಲೇಜು ಬಿಟ್ಟು ಮನೆಯಲ್ಲಿ ಹೇಳದೆ ಯಾಕೆ ಟೂರ್ ಹೋಗಿದ್ದಿಯಾ ಅಂತ ಬೈದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮನನೊಂದ ಚಂದ್ರಿಕಾ ಶನಿವಾರ ರಾತ್ರಿ 1:30 ರ ಸುಮಾರಿಗೆ ಕೊಠಡಿಯಿಂದ ಹೊರಹೋಗಿ ಭೀಷ್ಮ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಇಂದು ಶವವಾಗಿ ಪತ್ತೆಯಾಗಿದೆ.
ಸ್ಥಳಕ್ಕೆ ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಎಲ್.ಕೆ ಜೂಲಕಟ್ಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!