ಉದಯವಾಹಿನಿ, ಚಳಿಯೊಂದಿಗೆ ಉಚಿತವಾಗಿ ದೊರೆಯುವುದೆಂದರೆ ಸೀನು, ಸೋರುವ ಮೂಗು, ಕೆರೆಯುವ ಗಂಟಲು, ಕೆಮ್ಮು, ಆಗೀಗ ಬೆಚ್ಚಗಾಗುವ ಮೈ. ಇಂಥ ದಿನಗಳಲ್ಲೇ ಬಿಸಿಬಿಸಿ ಚಹಾ ಹೀರುವ ಮನಸ್ಸಾಗುವುದು. ಹೊಟ್ಟೆಯೊಳಗಿಂದ ತಲೆಯೆತ್ತುವ ನಡುಕದ ಹೆಡೆ ಮಡಿಸುವುದಕ್ಕೆ ಒಂದು ಖಡಕ್ ಚಹಾ (Tea) ಎಂಬ ಅಸ್ತ್ರ ಸಾಕಾಗುತ್ತದೆ. ಬಿಸಿ ಚಹಾ ಎಂದರೆ ಹಾಲಿನೊಂದಿಗಿನ ಇಂಗ್ಲಿಷ್ ಚಹಾನೇ ಆಗಬೇಕೆಂದಿಲ್ಲ. ಯಾವುದೋ ಹರ್ಬಲ್ ಟೀ, ಗ್ರೀನ್ ಟೀ, ಲೆಮೆನ್ ಟೀ ಮುಂತಾದ ಎಂಥದ್ದೂ ಆಗಬಹುದು. ಘಮಿಸುವ ಬಿಸಿ ಚಹಾ ಹೀರುವುದು ಚಳಿ ಓಡಿಸುವುದಕ್ಕೆ ಮಾತ್ರವಲ್ಲ, ಆರೋಗ್ಯಕ್ಕೆ ಲಾಭಗಳನ್ನುತರುವುದಕ್ಕೂ ಬೇಕು.
ನಮ್ಮ ಪ್ರತಿರೋಧಕ ಶಕ್ತಿ ಮತ್ತು ಚಹಾ ನಡುವಿನ ಬಾಂಧವ್ಯದ ಬಗ್ಗೆ ತಿಳಿಯದಿದ್ದರೆ ನಮ್ಮ ಮಾಹಿತಿ ಅಪೂರ್ಣ. ಹೆಚ್ಚುವ ಚಳಿಯು ಫ್ಲೂ ವೈರಸ್‌ಗಳಿಗೆ ಆಹ್ವಾನ ನೀಡುತ್ತಿದ್ದರೆ, ಹೊಟ್ಟೆ ಸೇರುವ ಚಹಾ ಪ್ರತಿರೋಧಕ ಶಕ್ತಿಯನ್ನು ಸಜ್ಜು ಮಾಡುತ್ತಿರುತ್ತದೆ. ಹಾಗಾಗಿ ಸೋಂಕುಗಳಿಗೆ ಮತ್ತು ಬಿಸಿ ಚಹಾಗೆ ಒಂಥರಾ ಎಣ್ಣೆ-ಸೀಗೆಕಾಯಿ ನಂಟು. ದೇಹದೊಳಗಿನ ತಪ್ತ ಕೋಶಗಳಿಗೆಲ್ಲಾ ಪುಟ್ಟದೊಂದು ಬೆಚ್ಚನೆಯ ಸ್ವೆಟರ್ ಹಾಕಿದಂತೆ ಈ ಬಿಸಿ ಚಹಾ ಹೀರುವುದು.
ಗ್ರೀನ್ ಟೀ: ಉಳಿದೆಲ್ಲಾ ಚಹಾಗಳಿಗೆ ಹೋಲಿಸಿದರೆ ದೇಹಕ್ಕೆ ಲಾಭ ತರುವುದರಲ್ಲಿ ಗ್ರೀನ್ ಟೀ ಅಗ್ರಗಣ್ಯ. ಹಲವರು ರೀತಿಯ ಉತ್ಕರ್ಷಣ ನಿರೋಧಕಗಳು ತುಂಬಿ ತುಳುಕುವ ಗ್ರೀನ್ ಟೀಯನ್ನು ಮೂಗು ಸೋರುವ ದಿನಗಳಲ್ಲಿ ಗುಟುಕರಿಸುವುದೆಂದರೆ, ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಶೇಷ ಕಾರ್ಯಪಡೆಯನ್ನು ರವಾನಿಸಿದಂತೆ. ದೇಹದ ಚಯಾಪಚಯವನ್ನು ಹೆಚ್ಚಿಸಿ, ತೂಕ ಇಳಿಸುವವರ ಸಂಗಾತಿ ಎನಿಸಿದೆ. ಜೊತೆಗೆ, ಮಾಮೂಲಿ ಚಹಾಗೆ ಹೋಲಿಸಿದರೆ ಅತಿ ಕಡಿಮೆ ಪ್ರಮಾಣದ ಕೆಫೇನ್ ಇದರಲ್ಲಿ ಇರುವುದು. ಹಾಗಾಗಿ ಗ್ರೀನ್ ಟೀ ಗುಟುಕರಿಸುವುದಕ್ಕೆ ಹಿಂಜರಿಯಬೇಡಿ.
