ಉದಯವಾಹಿನಿ, ದಾವಣಗೆರೆ: ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ ಅವರೇ ಮುಂದುವರೆಯುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಹೇಳಿದ್ದಾರೆ. ಕರ್ನಾಟಕದ ಕುರ್ಚಿ ಕಿತ್ತಾಟಕ್ಕೆ ಈಗ ಬ್ರೇಕ್ ಬಿದ್ದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬದಲಾವಣೆ ವಿಷಯ ಪಕ್ಷದ ಮುಂದೆಯೇ ಇಲ್ಲ. ಅಂತೆ ಕಂತೆ ಮಾತುಗಳು ಈಗ ಯಾಕೆ..? ಯಾವುದೇ ಗೊಂದಲ ಇರಬಾರದು ಎಂದು ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ ಎಂದರು.
ಹೈಕಮಾಂಡ್ ಹೇಗೆ ಹೇಳುತ್ತೋ ಹಾಗೇ ಐದು ವರ್ಷ ಸರ್ಕಾರ ನಡೆಸುತ್ತೇವೆ. ಮತ್ತೆ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕ್ರಿಕೆಟ್ ಆಡುವ 11 ಮಾತ್ರ ಬ್ಯಾಟ್ ಬೀಸಬೇಕು. ಉಳಿದವರು ಬ್ಯಾಟ್ ಬೀಸಿದರೆ ಏನು ಪ್ರಯೋಜನವಿಲ್ಲ. ಸ್ವಾಮೀಜಿಗಳು ಸೇರಿದಂತೆ ಯಾರೇ ಬ್ಯಾಟ್ ಬೀಸಿದರೂ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದರು.
ನಮ್ಮ ಸರ್ಕಾರ ಸ್ಥಿರವಾಗಿದ್ದು ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಬಿಜೆಪಿಯವರು ವಿಧಾನಸೌಧದಲ್ಲಿ ಕಾಂಗ್ರೆಸ್‌ನವರು ಶಾಸಕರ ಖರೀದಿ ಕೇಂದ್ರ ಮಾಡಿದ್ದಾರೆ ಎಂದು ಅರೋಪ ಮಾಡುತ್ತಾರೆ. ಅವರು ಹೇಗೆ ಅಧಿಕಾರಕ್ಕೆ ಬಂದರು ಎಂಬುದನ್ನು ಹೇಳಲಿ. ಅವರೇನು ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದಾರಾ? ಕನ್ನೇರಿ ಶ್ರೀಗಳು ಏನ್ ಹೇಳಿಕೆ ನೀಡುತ್ತಾರೆ ಎನ್ನುವುದು ಗೊತ್ತಿಲ್ಲ. ನನಗೆ ಬಾಬಾ ಸಾಹೇಬರ ಸಂವಿಧಾನದ ಬಗ್ಗೆ ಮಾತ್ರ ತಿಳಿದಿದೆ ಎಂದರು.
