ಉದಯವಾಹಿನಿ, ಚಿಕ್ಕಮಗಳೂರು: ದತ್ತಪೀಠದಲ್ಲಿ ದತ್ತಜಯಂತಿ ಆಚರಣೆ ಹಾಗೂ ಶೋಭಾಯಾತ್ರೆಯ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಚಿಕ್ಕಮಗಳೂರು ಪ್ರವೇಶಿಸಿದ ಮಾಜಿ ಎಂಪಿ ಪ್ರತಾಪ್ ಸಿಂಹ ಅವರ ಕಾರನ್ನೂ ಸಹ ಪೊಲೀಸರು ಪರಿಶೀಲಿಸಿದ್ದಾರೆ. ಮಂಗಳೂರಿನಿಂದ ಬರುತ್ತಿದ್ದ ಪ್ರತಾಪ್ ಸಿಂಹ ಅವರ ಕಾರನ್ನು ಚಿಕ್ಕಮಗಳೂರು ಗಡಿ ಗ್ರಾಮ ಕೊಟ್ಟಿಗೆಹಾರದ ಬಳಿ ಪೊಲೀಸರು ತಡೆದು ತಪಾಸಣೆ ಮಾಡಿದ್ದಾರೆ. ಪಿಎಸ್ಐ ರೇಣುಕಾ ನೇತೃತ್ವದಲ್ಲಿ ತಪಾಸಣೆ ನಡೆದಿದೆ. ತಪಾಸಣೆಗೆ ಮಾಜಿ ಸಂಸದರು ಸ್ಪಂದಿಸಿದ್ದಾರೆ. ದತ್ತಜಯಂತಿ ಅಂಗವಾಗಿ 28 ಚೆಕ್ ಪೋಸ್ಟ್‌ಗನ್ನು ಪೊಲೀಸರು ನಿರ್ಮಿಸಿದ್ದಾರೆ. 6 ಸಾವಿರಕ್ಕೂ ಅಧಿಕ ಪೊಲೀಸರಿಂದ ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಇಂದು (ಡಿ.2) ಅನುಸೂಯ ಜಯಂತಿ ನೆರವೇರಿದೆ. ಡಿ.3 ರಂದು ಚಿಕ್ಕಮಗಳೂರು ನಗರದಲ್ಲಿ ದತ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಸುಮಾರು 20-25 ಸಾವಿರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಡಿ.4ರಂದು ರಾಜ್ಯದ ಮೂಲೆ-ಮೂಲೆಗಳಿಂದ ಬರುವ 15 ಸಾವಿರಕ್ಕೂ ಅಧಿಕ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.
