ಉದಯವಾಹಿನಿ, ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯವರ ಅಮೋಘ ಶತಕದಾಟದ ನೆರವಿನಿಂದಾಗಿ ಟೀಮ್‌ ಇಂಡಿಯಾ ಗೆಲುವು ಸಾಧಿಸಿ, ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಹಾರ್ದಿಕ್‌ ಪಾಂಡ್ಯ ಗಾಯದ ಬಳಿಕ ತಂಡಕ್ಕೆ ಮರಳಿದ್ದ ನಿತೀಶ್‌ ಕುಮಾರ್‌ ರೆಡ್ಡಿ ಅವರಿಗೆ ತಂಡದಲ್ಲಿ ಸ್ಥಾನ ನೀಡದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದ ಆಯ್ಕೆಯ ಕುರಿತು ಮಾಜಿ ಸ್ಪಿನ್ನರ್‌ ಆರ್‌ ಅಶ್ವಿನ್‌ ಟೀಕಿಸಿದ್ದು, ಮೊದಲ ಪಂದ್ಯದಲ್ಲಿ ನಿತೀಶ್‌ ರೆಡ್ಡಿ ಅವರನ್ನು ಏಕೆ ಆಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್‌ ಅಗರ್ಕರ್‌, ಹಾರ್ದಿಕ್‌ ಪಾಂಡ್ಯ ಬದಲಿಗೆ ನಿತೀಶ್‌ ರೆಡ್ಡಿ ತಂಡದಲ್ಲಿದ್ದಾರೆ ಎಂದು ಹೇಳಿದ್ದರು. ಅದರಂತೆ ಅವರು ಎರಡು ಏಕದಿನ ಪಂದ್ಯಗಳನ್ನಾಡಿ, ಕೊನೆಯ ಪಂದ್ಯದಿಂದ ಹೊರಗುಳಿದಿದ್ದರು. ಬಳಿಕ ಟಿ20 ಸರಣಿಯಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಗಾಯಕ್ಕೆ ತುತ್ತಾದ ಕಾರಣ ಅವರನ್ನು ತಂಡದಿಂದ ಕೈಬಿಡಲಾಯಿತು. ಇದರ ಬಗ್ಗೆ ಮಾತನಾಡಿರುವ ಆರ್‌ ಅಶ್ವಿನ್‌, ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಅವರಿಗೆ ಸ್ಥಾನ ಸಿಗಬೇಕಿತ್ತು ಎಂದು ಆರ್‌ ಅಶ್ವಿನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಸ್ಪಿನ್‌ ದಂತಕತೆ ಆರ್‌ ಅಶ್ವಿನ್‌, “ಹಾರ್ದಿಕ್ ಪಾಂಡ್ಯ ಇಲ್ಲದ ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಸಿಗದಿದ್ದರೆ, ತಂಡದ ಆಯ್ಕೆಯಲ್ಲಿ ಏನೋ ತಪ್ಪಾಗಿದೆ, ಅವರನ್ನು ಏಕೆ ಆಯ್ಕೆ ಮಾಡಲಾಯಿತು? ಏಕೆಂದರೆ ಹಾರ್ದಿಕ್ ನೀಡಬಹುದಾದ ಪ್ರದರ್ಶನವನ್ನು ಅವರು ನೀಡಬಲ್ಲರು ಮತ್ತು ಕ್ರಮೇಣ ಉತ್ತಮಗೊಳ್ಳಬಹುದು. ಆದರೆ, ಈ ಪ್ಲೇಯಿಂಗ್‌ XI ನಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಸಿಗದಿದ್ದರೆ, ತಂಡದ ಆಯ್ಕೆಯನ್ನು ಸರಿಯಾಗಿ ಪರಿಶೀಲಿಸಬೇಕು,” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!