ಉದಯವಾಹಿನಿ, : ಲೆಜೆಂಡ್ಸ್ ಪ್ರೊ ಟಿ20 ಲೀಗ್ ತನ್ನ ಮುಂದಿನ ಆಟಗಾರರ ಪಟ್ಟಿಯನ್ನು ಪ್ರಕಟಿಸುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಬಾರಿ ಲೀಗ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟಾರ್ ಆಟಗಾರರಾದ ದಿನೇಶ್ ಕಾರ್ತಿಕ್ , ಶಾನ್ ಮಾರ್ಶ್, ಅಮಿತ್ ಮಿಶ್ರಾ, ವಿನಯ್ ಕುಮಾರ್ ಮತ್ತು ಇಂಗ್ಲೆಂಡ್‌ನ ಪ್ರಸಿದ್ಧ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಗೋವಾದಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯಲ್ಲಿ ಈ ದಿಗ್ಗಜರು ಕಾಣಿಸಿಕೊಳ್ಳಲಿದ್ದಾರೆ.ಭಾರತದ ಪ್ರಸಿದ್ಧ ಫಿನಿಷರ್‌ಗಳಲ್ಲೊಬ್ಬರಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆಂಟರ್ ದಿನೇಶ್ ಕಾರ್ತಿಕ್ 2018ರ ನಿಧಾಹಾಸ್ ಟ್ರೋಫಿ ಫೈನಲ್‌ನಲ್ಲಿ ಆಡಿದ ನೆನಪಿನ ಪ್ರದರ್ಶನಕ್ಕಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ. 2024ರಲ್ಲಿ ತಮ್ಮ ಟಿ20 ವೃತ್ತಿಜೀವನವನ್ನು ಮುಗಿಸಿದ ಅವರು ಮತ್ತೆ ಮೈದಾನಕ್ಕೆ ಮರಳುತ್ತಿರುವುದು ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ.
ಈ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್, “ಭಾರತವನ್ನು ಪ್ರತಿನಿಧಿಸಿರುವ ವರ್ಷಗಳು ನನಗೆ ಅನೇಕ ಸ್ಮರಣೀಯ ಕ್ಷಣಗಳನ್ನು ಕೊಟ್ಟಿವೆ. ಮತ್ತೆ ಆಡುವ ಅವಕಾಶ ಸಿಕ್ಕಿರುವುದು ನನಗೆ ತುಂಬಾ ವಿಶೇಷ. ಲೆಜೆಂಡ್ಸ್ ಪ್ರೊ ಟಿ20 ಲೀಗ್ ನಮ್ಮಂತಹ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತಿದೆ. ಗೋವಾದಂತಹ ಅದ್ಭುತ ಸ್ಥಳದಲ್ಲಿ ಮತ್ತೆ ಅಭಿಮಾನಿಗಳ ಎದುರು ಆಡುವುದಕ್ಕಾಗಿ ನಾನು ತುಂಬಾ ಉತ್ಸುಕರಾಗಿದ್ದೇನೆ,” ಎಂದಿದ್ದಾರೆ.
