ಉದಯವಾಹಿನಿ, ಬೆಳಗಾವಿ: ಡಿ.8ರಿಂದ ನಡೆಯಲಿರುವ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮುಖ್ಯಮಂತ್ರಿ ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದಿಂದ ಈಗಾಗಲೇ 3 ಸಾವಿರ ರೂಮ್ ಬುಕ್ ಆಗಿದ್ದು, ಸಿಎಂ ಮತ್ತು ಡಿಸಿಎಂಗೆ ಅತಿಥಿ ಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದೆ.

6 ಸಾವಿರ ಪೊಲೀಸ್‌ ಭದ್ರತೆ : ಚಳಿಗಾಲದ ಅಧಿವೇಶನ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣ ಬಳಿಕ ಎಚ್ಚೆತ್ತುಕೊಳ್ಳಲಾಗಿದ್ದು, ಅಧಿವೇಶನದ ವೇಳೆ ನಿಗಾ ವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಕಾರಣ ಬೆಳಗಾವಿ ಸುವರ್ಣಸೌಧದ ಸುತ್ತಮುತ್ತ ಹೈಅಲರ್ಟ್ ಘೋಷಿಸಲಾಗಿದೆ.
ಬೆಳಗಾವಿ ನಗರದಲ್ಲಿ ಹೆಚ್ಚುವರಿಯಾಗಿ 6 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 6 ಎಸ್ಪಿ ದರ್ಜೆಯ ಪೊಲೀಸ್‌ ಅಧಿಕಾರಿಗಳು, 146 ಹಿರಿಯ ಪೊಲೀಸ್ ಅಧಿಕಾರಿಗಳು, 3,820 ಪೊಲೀಸ್ ಸಿಬ್ಬಂದಿ, 500 ಹೋಂ ಗಾರ್ಡ್ಸ್, 8 ಕ್ಷಿಪ್ರ ಕಾರ್ಯಪಡೆ, 10 ಡಿಎಆರ್ ತುಕಡಿ, 35 ಕೆಎಸ್‌ಆರ್‌ಪಿ ತುಕಡಿ, 1 ಬಿಡಿಡಿಎಸ್ ತಂಡ, 1 ಗರುಡಾ ಫೋರ್ಸ್, 16 ವಿಧ್ವಂಸಕ ಕೃತ್ಯ ತಪಾಸಣೆ ತಂಡಗಳು ಭದ್ರತೆಗಾಗಿ ನಿಯೋಜನೆಗೊಂಡಿವೆ. ಸುವರ್ಣ ವಿಧಾನಸೌಧ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಇರಲಿದ್ದು, ಸುವರ್ಣ ಗಾರ್ಡನ್ ಮತ್ತು ಅಲಾರವಾಡ ಬಳಿ ಪ್ರತಿಭಟನೆಗಳಿಗೆ ಸ್ಥಳ ನಿಗದಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!